ಕಂಬಳ ಕ್ಷೇತ್ರದ ಸಾಧನೆಗಾಗಿ ಗೋಪಾಲ ನಾಯ್ಕ್‌ಗೆ ಕ್ರೀಡಾ ರತ್ನ ಪ್ರಶಸ್ತಿ
ಉಡುಪಿ, ಎ.೫: ಕಂಬಳ ಕ್ಷೇತ್ರದಲ್ಲಿನ ಸಾಧನೆಗಾಗಿ ಬ್ರಹ್ಮಾವರದ ಮಂದರ್ತಿ ಸಮೀಪದ ಶಿರೂರು ಮುದ್ದುಮನೆ ನಿವಾಸಿ ಗೋಪಾಲ ನಾಯ್ಕ್ (೪೦) ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕುಡುಬಿ ಜನಾಂಗದ ಬಡ ಕೃಷಿ ಕುಟುಂಬದಿಂದ ಬಂದಿರುವ ಇವರು, ಕುಷ್ಟ ನಾಯ್ಕ್ ಹಾಗೂ ಬುಡ್ಡಿ ಬಾಯಿ ದಂಪತಿ ಪುತ್ರ. ಏಳನೇ ತರಗತಿಗೆ ಶಿಕ್ಷಣವನ್ನು ನಿಲ್ಲಿಸಿದ ಇವರು, ಬದುಕು ಕಟ್ಟಿಕೊಳ್ಳಲು ಬೇರೆ ಬೇರೆ ಕೆಲಸದಲ್ಲಿ ತೊಡಗಿಸಿ ಕೊಂಡರು. ತಂದೆಯೊಂದಿಗೆ ಕೃಷಿ ಕಾಯಕ ಮಾಡಲು ಆರಂಭಿಸಿದ ಇವರು, ತಂದೆ ಸಾಕಿದ್ದ ಕೋಣಗಳ ಪೋಷಣೆ ಮಾಡಿದರು. ಮನೆಯ ವಿಶಾಲ ವಾದ ಗದ್ದೆಯಲ್ಲಿ ಕೋಣಗಳನ್ನು ಓಡಿಸುತ್ತ ಕಂಬಳ ಕ್ಷೇತ್ರಕ್ಕೆ ಕಾಲಿಟ್ಟರು. ಕಂಬಳದಲ್ಲಿ ಬೇರೆಯವರ ಕೋಣ ಓಡಿಸುವುದು ಇವರ ಪ್ರವೃತ್ತಿಯಾಗಿತ್ತು.
ಬಾರ್ಕೂರು ಶಾಂತರಾಮ್ ಶೆಟ್ಟಿ ಅವರ ಕೋಣಗಳನ್ನು ಓಡಿಸಿ ಇವರು ಹಲವು ಪದಕಗಳನ್ನು ಪಡೆದುಕೊಂಡರು. ಈವರೆಗೆ ಸಾವಿರಕ್ಕೂ ಅಧಿಕ ಪ್ರಶಸ್ತಿಗಳ ಜೊತೆ ಗೋಲ್ಡನ್ ಗೋಪಾಲ ಎಂಬ ಬಿರುದು ಪಡೆದರು. ಗೋಪಾಲ ನಾಯ್ಕ್ ಕೃಷಿ, ತೋಟಗಾರಿಕೆ, ಹೈನುಗಾರಿಕೆಯಲ್ಲೂ ಅಪಾರ ಉತ್ಸಾಹ ಹೊಂದಿದ್ದಾರೆ.