ಆತ್ರಾಡಿಯಲ್ಲಿ ಪೋಷಣ್ ಪಕ್ವಾಡ ಸಮಾರೋಪ

ಉಡುಪಿ : ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠವಾದ ಮಕ್ಕಳು ದೇಶದ ಆಸ್ತಿ. ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಹೇಳಿದ್ದಾರೆ.
ಸೋಮವಾರ ಆತ್ರಾಡಿ ಗ್ರಾಪಂನ ಎಚ್.ಮಹೀಮ್ ಹೆಗ್ಡೆ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಲಯನ್ಸ್ ಕ್ಲಬ್ ಉಡುಪಿ, ಚೇತನಾ, ಸಂಜೀವಿನಿ ಹಾಗೂ ಸ್ತ್ರೀಶಕ್ತಿ ಒಕ್ಕೂಟ ಉಡುಪಿ ಮತ್ತು ಗ್ರಾಪಂ ಆತ್ರಾಡಿ ಇವರ ಸಹಯೋಗದಲ್ಲಿ ನಡೆದ ಪೋಷಣ್ ಅಭಿಯಾನ್ ಯೋಜನೆಯ ‘ಪೋಷಣ್ ಪಕ್ವಾಡ-೨೦೨೨’ರ ಸಮಾರೋಪ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆತ್ರಾಡಿ ಗ್ರಾಪಂನ ಅಧ್ಯಕ್ಷೆ ರೂಪಾ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳಿಗೆ ಅಂಗನವಾಡಿ ಮೂಲಕ ಹಲವು ಸೌಲಭ್ಯಗಳು ಲಭ್ಯವಿದ್ದು, ಇವುಗಳ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಣ್ ಅಭಿಯಾನ ಹಾಗೂ ಇಲಾಖಾ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಪೋಷಣ್ ಪಕ್ವಾಡ ಕಾರ್ಯಕ್ರಮದ ಅಂಗವಾಗಿ ಪೌಷ್ಠಿಕ ಆಹಾರಗಳ ಪ್ರಾತ್ಯಕ್ಷಿಕೆ ನಡೆಯಿತು.
ಕಾರ್ಯಕ್ರಮದಲ್ಲಿ ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನರಸಿಂಹ ನಾಯಕ್, ಆತ್ರಾಡಿ ಗ್ರಾಪಂ ಉಪಾಧ್ಯಕ್ಷ ರತ್ನಾಕರ ಶೆಟ್ಟಿ, ಎನ್‌ಆರ್‌ಎಲ್‌ಎಮ್‌ನ ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ಲಯನ್ಸ್ ಕ್ಲಬ್ ಉಡುಪಿ ಚೇತನಾದ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸಂಜೀವಿನಿ ಗ್ರಾಮ ಒಕ್ಕೂಟದ ಅಧ್ಯಕ್ಷೆ ಆಶಾ ಎಂ. ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಆತ್ರಾಡಿ ಗ್ರಾಪಂ ಪಿಡಿಓ ಸಂತೋಷ್ ಜೋಗಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಪೂರ್ಣಿಮಾ ವಂದಿಸಿದರು.







