ಬಿಜೆಪಿ ಚುನಾವಣಾ ಸಿದ್ಧತೆ: ಎ. 12ರಿಂದ ಮೂರು ತಂಡಗಳಲ್ಲಿ ನಾಯಕರ ಕರ್ನಾಟಕ ಪ್ರವಾಸ

ಬೆಂಗಳೂರು, ಎ.5: ಎಪ್ರಿಲ್ 12ರಿಂದ ಬಿಜೆಪಿ ನಾಯಕರು ಮೂರು ತಂಡಗಳಾಗಿ ರಾಜ್ಯ ಪ್ರವಾಸ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮುಖಂಡರು ರಾಜ್ಯ ಪ್ರವಾಸ ನಡೆಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಮಾಹಿತಿ ನೀಡಿದ್ದಾರೆ.
ಪಕ್ಷದ ಸಂಘಟನೆ ದೃಷ್ಟಿಯಿಂದ ಈ ನಾಯಕರು ಎರಡು ಹಂತಗಳಲ್ಲಿ ಪ್ರವಾಸ ನಡೆಸಲಿದ್ದಾರೆ. ಏಪ್ರಿಲ್ 12ರಿಂದ 15ರವರೆಗೆ ಮೊದಲ ಹಂತ, ಏಪ್ರಿಲ್ 19ರಿಂದ 21ರವರೆಗೆ ಎರಡನೇ ಹಂತದಲ್ಲಿ ಪ್ರವಾಸ ನಡೆಯಲಿದೆ.
ರಾಜ್ಯ ಪ್ರವಾಸದ ಸಂಯೋಜಕರಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ರಾಜ್ಯ ಕಾರ್ಯದರ್ಶಿಗಳಾದ ತುಳಸಿ ಮುನಿರಾಜು ಗೌಡ, ಕೆ.ಎಸ್.ನವೀನ್ ಮತ್ತು ಹೇಮಲತಾ ನಾಯ್ಕ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಪ್ರವಾಸದ ಪೂರ್ವ ಸಿದ್ಧತೆ ಕುರಿತು ಬಿಜೆಪಿ ರಾಜ್ಯ ಕಚೇರಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಪ್ರವಾಸ ಸಂಯೊಜಕರ ಸಭೆ ನಡೆಯಲಿದೆ.
ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ಒಳಗೊಂಡ ತಂಡವು ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಬಲವರ್ಧನೆಗೆ ಏಪ್ರಿಲ್ 12ರಿಂದ 24ರವರೆಗೆ ಮೂರು ತಂಡಗಳಲ್ಲಿ ಪ್ರವಾಸ ನಡೆಸಲಿದೆ. ಈ ತಂಡಗಳು ವಿಭಾಗ ಕೇಂದ್ರದಲ್ಲಿ ಎರಡು ದಿನಗಳ ಕಾರ್ಯಕ್ರಮ ಸಂಘಟಿಸಲಿವೆ. ಪ್ರತಿ ಜಿಲ್ಲಾ ಕೇಂದ್ರದಲ್ಲೂ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯ ನಂತರ ಜಿಲ್ಲಾ ಮಟ್ಟದ ಪದಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು. ಜಿಲ್ಲೆಯ ಪ್ರಮುಖರೊಂದಿಗೆ ವೈಯಕ್ತಿಕ ಮಾತುಕತೆಗೆ ಅವಕಾಶ ಮಾಡಿಕೊಡಲಾಗುವುದು. ಈ ತಂಡಗಳು ವಿಭಾಗ ಕೇಂದ್ರದ ಮಂಡಲಗಳ ಬೂತ್ ಅಧ್ಯಕ್ಷರು ಮತ್ತು ಶಕ್ತಿ ಕೇಂದ್ರದ ಪ್ರಮುಖರೊಂದಿಗೂ ಸಂವಾದ ನಡೆಸಲಿವೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಮಾಹಿತಿ ನೀಡಿದ್ದಾರೆ.







