ಗುಂಡ್ಯದಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ: ಆರೋಪ
ಸ್ಥಳೀಯ ಕೆಲವು ಯುವಕರ ವಿರುದ್ಧ ಪ್ರಕರಣ ದಾಖಲು

ಉಪ್ಪಿನಂಗಡಿ, ಎ. 5: ವೇಣೂರು ಮೂಲದ ಯುವತಿಯೋರ್ವಳನ್ನು ಪುತ್ತೂರು ಮೂಲದ ಯುವಕನೋರ್ವ ತನ್ನ ರಿಕ್ಷಾದಲ್ಲಿ ಗುಂಡ್ಯ ಪರಿಸರದ ಕಾಡುಮೇಡುಗಳಲ್ಲಿ ಅಲೆದಾಡಿಸುತ್ತಿದ್ದುದಾಗಿ ಆರೋಪಿಸಿ ಸ್ಥಳೀಯರು ರಿಕ್ಷಾ ಚಾಲಕನನ್ನು ಮತ್ತು ಯುವತಿಯನ್ನು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳವಾರ ನಡೆದಿದೆ.
ಇದೇ ವೇಳೆ ಪೊಲೀಸರಿಗೆ ಒಪ್ಪಿಸುವ ಮುನ್ನ ಸ್ಥಳೀಯರು ತನಗೆ ಹಲ್ಲೆ ನಡೆಸಿದ್ದಾರೆ ಎಂದು ಯುವಕ ನೀಡಿದ ದೂರಿನಂತೆ ಸ್ಥಳೀಯ ಕೆಲವು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಯುವಕನನ್ನು ಸಂಪ್ಯದ ಆರ್ಯಾಪು ನಿವಾಸಿ ರಿಕ್ಷಾ ಚಾಲಕ ನಝೀರ್ (21) ಎಂದು ಗುರುತಿಸಲಾಗಿದೆ.
ಈತ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ಯುವತಿಯನ್ನು ಕಾಡಿನ ಪರಿಸರದಲ್ಲಿ ಅಲೆದಾಡಿಸುತ್ತಿರುವುದನ್ನು ಕಂಡು ಸ್ಥಳೀಯರು ವಿಚಾರಿಸಿದರೆನ್ನಲಾಗಿದೆ. ಈ ಬಗ್ಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಅವರಿಬ್ಬರನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಇತ್ತ ತನ್ನನ್ನು ಪೊಲೀಸರಿಗೆ ಒಪ್ಪಿಸುವ ಮುನ್ನ ಸ್ಥಳೀಯರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಿಕ್ಷಾ ಚಾಲಕ ದೂರಿದ್ದು, ಈ ಹಿನ್ನೆಲೆಯಲ್ಲಿ ಸುರೇಂದ್ರ, ತೀರ್ಥ ಪ್ರಸಾದ್, ಜಿತೇಶ್ ಹಾಗೂ ಇತರರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಈ ಬಗ್ಗೆ ನಝೀರ್ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎ.5ರಂದು ಮಧ್ಯಾಹ್ನ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಆಟೋ ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿಯಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡ್ಯಕ್ಕೆ ತೆರಳಿದ್ದೆವು. ಬಳಿಕ ಅಲ್ಲಿಂದ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿಗೆ ತೆರಳುವಾಗ ಸುರೇಂದ್ರ, ತೀರ್ಥಪ್ರಸಾದ್, ಜಿತೇಶ್ ಹಾಗೂ ಇತರರು ನಮ್ಮ ಆಟೊ ರಿಕ್ಷಾವನ್ನು ತಡೆದು ನಿಲ್ಲಿಸಿ ನಮ್ಮನ್ನು ವಿಚಾರಿಸಿದ್ದು, ತಾನು ಹಾಗೂ ತನ್ನ ಜೊತೆಯಲ್ಲಿದ್ದ ಯುವತಿ ಹೆಸರು ಹೇಳಿದಾಗ ಆರೋಪಿಗಳು ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನಗೆ ತಿರುಗಾಡಲು ಇತರ ಧರ್ಮೀಯ ಯುವತಿಯೇ ಆಗಬೇಕಾ ಎಂದು ಹೇಳುತ್ತಾ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







