ಬೆಂಗಳೂರು: ಚಾಕುವಿನಿಂದ ಇರಿದು ಯುವಕನ ಕೊಲೆ

ಚಂದ್ರು - ಮೃತ ಯುವಕ
ಬೆಂಗಳೂರು, ಎ.5: ಯುವಕನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣ ವರದಿಯಾಗಿದ್ದು, ಈ ಸಂಬಂಧ ಮೂವರನ್ನು ಜಗಜೀವನರಾಮ್ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚಂದ್ರು ಎಂಬಾತ ಕೊಲೆಯಾದ ದುದೈರ್ವಿ ಆಗಿದ್ದು, ಘಟನೆ ಸಂಬಂಧ ಶಾಹಿದ್ ಎಂಬಾತ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಶ್ಚಿಮ ಪ್ರಭಾರ ಡಿಸಿಪಿ ಅನುಚೇತ್, ಐಟಿಐ ಪದವೀಧರನಾಗಿರುವ ಚಂದ್ರು ರೈಲ್ವೆ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಫಿಟ್ಟರ್ ಕೆಲಸ ಮಾಡಿಕೊಂಡಿದ್ದ. ನಿನ್ನೆ ತನ್ನ ಸ್ನೇಹಿತ ಸೈಮನ್ ಹುಟ್ಟು ಹಬ್ಬವಿತ್ತು. ಹೀಗಾಗಿ ತಡರಾತ್ರಿಯವರೆಗೂ ಪಾರ್ಟಿ ಮಾಡಿ ಊಟಕ್ಕಾಗಿ ಅಲೆದಾಡಿದ್ದಾರೆ.
ತಾನಿರುವ ಛಲವಾದಿ ಪಾಳ್ಯದಲ್ಲಿ ಯಾವುದೇ ಹೊಟೇಲ್ಗಳು ತೆರೆದಿರಲಿಲ್ಲ.ಹಾಗಾಗಿ, ಜೆ.ಜೆ.ನಗರಕ್ಕೆ ಬೈಕ್ನಲ್ಲಿ ಸ್ನೇಹಿತ ಸೈಮನ್ ನನ್ನು ಕೂರಿಸಿಕೊಂಡು ಹೋಗಿದ್ದಾರೆ. ಈ ವೇಳೆ, ಅಪರಿಚಿತರ ಯುವಕರ ಬೈಕ್ಗೆ ಚಂದ್ರುವಿನ ಬೈಕ್ ತಗುಲಿದೆ. ಪರಿಣಾಮ, ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ ಎಂದರು.
ತಡರಾತ್ರಿ ಅಪರಿಚಿತರಿಂದ ಯುವಕನ ಕೊಲೆಮಾತಿಗೆ ಮಾತು ಬೆಳೆದು, ನಾಲ್ವರಲ್ಲಿ ಒಬ್ಬ ಏಕಾಏಕಿ ಹರಿತವಾದ ಚಾಕು ತೆಗೆದುಕೊಂಡು ಚಂದ್ರುವಿಗೆ ಚುಚ್ಚಿದ್ದಾನೆ. ನಂತರ ಸೈಮನ್ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ಬೆಳಗಿನ ಜಾವ ಎರಡೂವರೆ ಗಂಟೆಗೆ ಈ ಘಟನೆ ನಡೆದಿದೆ ಎಂದು ತಿಳಿಸಿದರು.
ಘಟನೆ ಬಗ್ಗೆ ಪೊಲೀಸರು ಮುಂಜಾನೆ 4-30ಕ್ಕೆ ಪ್ರಕರಣ ದಾಖಲಿಸಿ, ಮಿಂಚಿನ ಕಾರ್ಯಾಚರಣೆ ನಡೆಸಿ ಶಾಹಿದ್ ಸೇರಿ ಮೂವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ ಎಂದು ಹೇಳಿದರು.







