ರಸ್ತೆ ಗುಂಡಿ ಮುಚ್ಚಲು ವಲಯವಾರು ಕ್ರಿಯಾ ಯೋಜನೆ ರೂಪಿಸಿ: ಬಿಬಿಎಂಪಿಗೆ ಹೈಕೋರ್ಟ್ ಆದೇಶ

ಬೆಂಗಳೂರು, ಎ.5: ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ವಲಯವಾರು ಕ್ರಿಯಾ ಯೋಜನೆ ರೂಪಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರಿನ ರಸ್ತೆ ದುಸ್ಥಿತಿ ಕುರಿತು ಕೋರಮಂಗಲದ ನಿವಾಸಿ ವಿಜಯ್ ಮೆನನ್ 2015ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.
ಬಿಬಿಎಂಪಿಯ ಎಂಟು ವಲಯಗಳಲ್ಲಿ ರಸ್ತೆ ಅಗೆಯುವ ಏಜೆನ್ಸಿಗಳನ್ನು ಗುರುತಿಸಬೇಕು. ಅವರೊಂದಿಗೆ ಬಿಬಿಎಂಪಿ ಅಧಿಕಾರಿಗಳು ಸಭೆ ನಡೆಸಬೇಕು. ರಸ್ತೆಗಳ ಜಂಟಿ ಸರ್ವೇ ನಡೆಸಿ ಯೋಜನೆ ರೂಪಿಸಬೇಕು ಎಂದು ನ್ಯಾಯಪೀಠವು ಆದೇಶ ಹೊರಡಿಸಿದೆ.
ರಸ್ತೆ ಗುಂಡಿ ಮುಚ್ಚಲು ಸಂಸ್ಥೆ ಆಸಕ್ತಿ ವ್ಯಕ್ತಪಡಿಸಿದೆ. ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ ಸಂಸ್ಥೆ ಸಿದ್ಧವಿದೆ. ಸಂಸ್ಥೆಯೊಂದಿಗೂ ಅಧಿಕಾರಿಗಳು ಸೇರಿ ಯೋಜನೆ ರೂಪಿಸಬೇಕು ಎಂದು ಪೀಠವು ಆದೇಶ ನೀಡಿದೆ.
ಬಿಬಿಎಂಪಿ ಈವರೆಗೂ ಕೈಗೊಂಡ ಕ್ರಮಗಳ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, ನೀವು ಕೆಲಸ ಮಾಡುವ ಬಗ್ಗೆ ತಿಳಿಸುತ್ತೀರಾ ಏನೂ ಮಾಡುವುದಿಲ್ಲ. ಬಿಬಿಎಂಪಿ ಪ್ರತಿ ದಿನ ಒಂದು ವಲಯದ ಸಭೆ ನಡೆಸಬೇಕು. ಎ.19ರೊಳಗೆ 8 ವಲಯಗಳ ಕ್ರಿಯಾಯೋಜನೆ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠ ತಾಕೀತು ಮಾಡಿದೆ.







