ಮೈಸೂರಿನಲ್ಲಿ ಇವಿಎಂ ನಿಷೇಧಿಸುವಂತೆ ಒತ್ತಾಯಿಸಿ ಅಂಚೆ ಪತ್ರ ಚಳವಳಿ
ಮುಂಬರುವ ಚುನಾವಣೆಯಲ್ಲಿ ಮತ ಪತ್ರ ಜಾರಿಗೆ ತರದಿದ್ದರೆ ಚುನಾವಣೆ ಬಹಿಷ್ಕಾರ: ಎನ್.ಭಾಸ್ಕರ್

ಮೈಸೂರು,ಎ.5: ಪ್ರಜಾಪ್ರಭುತ್ವ ಉಳಿವಿಗಾಗಿ ಮುಂಬರುವ ಚುನಾವಣೆಗಳಲ್ಲಿ ಇವಿಎಂ ಅನ್ನು ನಿಷೇಧಿಸಿಸುವಂತೆ ಒತ್ತಾಯಿಸಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ರಾಜ್ಯ ಚುನಾವಣಾ ಆಯೋಗಕ್ಕೆ ಅಂಚೆ ಪತ್ರ ಚಳವಳಿ ನಡೆಸಲಾಯಿತು.
ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿರುವ ಅಂಚೆ ಪೆಟ್ಟಿಗೆಗೆ ಮಂಗಳವಾರ ಇವಿಎಂ ನಿಷೇಧಿಸುವಂತೆ ಅಂಚೆ ಪತ್ರಗಳನ್ನು ಹಾಕುವ ಮೂಲಕ ರಾಜ್ಯ ಚುನಾವಣಾ ಆಯೋಗಕ್ಕೆ ಒತ್ತಾಯಿಸಲಾಯಿತು.
ಇದೇ ವೇಳೆ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ಮಾತನಾಡಿ, ಇತ್ತೀಚೆಗೆ ಇವಿಎಂ ಕಾಣೆಯಾಗಿರುವುದು ರಾಜ್ಯ ಶಾಸಕಾಂಗ ಸಭೆಯಲ್ಲಿ ಪ್ರತಿಧ್ವನಿಸಿದ್ದು ದೇಶಾದ್ಯಂತ ನಡೆದ ಚುನಾವಣೆಗಳಲ್ಲಿ ಇವಿಎಂ ಅವಾಂತರ, ಅಲ್ಲಲ್ಲಿ ಇವಿಎಂ ಮಷಿನ್ ಗಳ ದುರುಪಯೋಗ ಕಾಣುತ್ತಿರುವುದು ಪ್ರಜಾಪ್ರಭುತ್ವದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಾಫ್ಟವೇರ್ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮವೆಸಗುತ್ತಿರುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಇವಿಎಂ ನಿಷೇಧಿಸಿ ಮತಪತ್ರ ಜಾರಿಗೊಳಿಸುವಂತೆ ಒತ್ತಾಯಿಸಿ ಅಂಚೆ ಪತ್ರ ಚಳವಳಿಯನ್ನು ನಡೆಸಿದ್ದೇವೆ ಎಂದರು.
ಮುಂದಿನ ಚುನಾವಣೆಗಳಲ್ಲಿ ಬ್ಯಾಲೆಟ್ ಮತಪತ್ರ ಜಾರಿಗೆ ತರದಿದ್ದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯಲಿದೆ. ಚುನಾವಣಾ ಆಯೋಗ ಇವಿಎಂ ಬದಲಿಸದಿದ್ದರೆ ರಾಜ್ಯಾದ್ಯಂತ ಚುನಾವಣೆಗಳನ್ನು ಬಹಿಷ್ಕರಿಸುವ ತೀರ್ಮಾನವನ್ನು ಕೈಗೊಳ್ಳುವ ಮೂಲಕ ಚುನಾವಣಾ ಹಕ್ಕು ಚಲಾಯಿಸುವ ಪ್ರಕ್ರಿಯೆಯಿಂದ ದೂರ ಉಳಿಯುವುದಾಗಿ ಚುನಾವಣಾ ಆಯೋಗಕ್ಕೆ ಎಚ್ಚರಿಕೆ ನೀಡಿದರು.
ಅಂಚೆ ಪತ್ರ ಚಳವಳಿಯಲ್ಲಿ ಸಂವಿಧಾನ ಸರಂಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್, ರಾಜ್ಯ ನಾಯಕರ ಸಂಘದ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ವಕೀಲ ತಿಮ್ಮಯ್ಯ, ಕರ್ನಾಟಕ ರಾಜ್ಯ ಸಂಶೋಧಕರ ಸಂಘದ ರಾಜ್ಯಾಧ್ಯಕ್ಷ ಮರಿದೇವಯ್ಯ, ಕಾಂಗ್ರೆಸ್ ಮುಖಂಡ ಹೆಡತಲೆ ಮಂಜುನಾಥ್, ಲೋಕೇಶ್ ರಾವ್, ವಿಜಯಕುಮಾರ್, ಎಂ.ಎಸ್.ಕಲೀಂ, ಎನ್.ಆರ್.ನಾಗೇಶ್, ವೀರರಾಜು, ಶಿವಪ್ರಸಾದ್ ಸೇರಿದಂತೆ ಹಲವರು ಭಾಗವಹಿಸಿದ್ದರು.







