ಆಮ್ನೆಸ್ಟಿ ಇಂಡಿಯಾದ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್ ರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಡೆಹಿಡಿದ ಅಧಿಕಾರಿಗಳು

ಆಕಾರ್ ಪಟೇಲ್
ಬೆಂಗಳೂರು,ಎ.6: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಾನು ಅಮೆರಿಕಕ್ಕೆ ಪ್ರಯಾಣಿಸಲು ವಿಮಾನವನ್ನು ಹತ್ತುತ್ತಿದ್ದಾಗ ತನ್ನನ್ನು ತಡೆಯಲಾಗಿದೆ ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾದ ಮಾಜಿ ಮುಖ್ಯಸ್ಥ ಆಕರ ಪಟೇಲ್ ಅವರು ಬುಧವಾರ ಆರೋಪಿಸಿದ್ದಾರೆ.
ಆಮ್ನೆಸ್ಟಿ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನ್ನನ್ನು ನಿರ್ಗಮನ ನಿಯಂತ್ರಣ ಪಟ್ಟಿಯಲ್ಲಿರಿಸಲಾಗಿದೆ ಎಂದು ಪಟೇಲ್ ಟ್ವೀಟಿಸಿದ್ದಾರೆ.
‘ಮೋದಿ ಸರಕಾರವು ಆಮ್ನೆಸ್ಟಿ ವಿರುದ್ಧ ಹೂಡಿರುವ ಪ್ರಕರಣದಿಂದಾಗಿ ನನ್ನ ವಿರುದ್ಧ ಲುಕ್-ಔಟ್ ಸುತ್ತೋಲೆಯಿದೆ ಎಂದು ಸಿಬಿಐ ಅಧಿಕಾರಿಯೋರ್ವರು ಕರೆ ಮಾಡಿ ತಿಳಿಸಿದರು’ ಎಂದಿರುವ ಪಟೇಲ್,ಗುಜರಾತಿನ ನ್ಯಾಯಾಲಯವು ತನ್ನ ಪ್ರಯಾಣಕ್ಕೆ ನಿರ್ದಿಷ್ಟವಾಗಿ ಅನುಮತಿ ನೀಡಿದ್ದರೂ ತಾನು ಅಮೆರಿಕಕ್ಕೆ ತೆರಳುವುದನ್ನು ತಡೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಆದಾಗ್ಯೂ ಸಿಬಿಐ ಮೂಲಗಳು,ಗುಜರಾತ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಸೂರತ್ ನ ನ್ಯಾಯಾಲಯವು ಪಟೇಲ್ ಅವರ ಅಮೆರಿಕ ಪ್ರಯಾಣಕ್ಕೆ ಅನುಮತಿ ನೀಡಿತ್ತು. ಆದರೆ ಅವರ ವಿರುದ್ಧ ಲುಕ್-ಔಟ್ ಸುತ್ತೋಲೆಯನ್ನು ಹೊರಡಿಸಲಾಗಿದೆ ಮತ್ತು 36 ಕೋ.ರೂ.ಗಳ ವಿದೇಶಿ ನಿಧಿಗೆ ಸಂಬಂಧಿಸಿದಂತೆ ವಿದೇಶಿ ದೇಣಿಗೆಗಳ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) ಉಲ್ಲಂಘನೆಗಳಿಗಾಗಿ ಸಿಬಿಐ ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಮತ್ತು ಇತರರ ವಿರುದ್ಧ ದಾಖಲಿಸಿಕೊಂಡಿರುವ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಬುಧವಾರ ಭಾರತವನ್ನು ತೊರೆಯುವುದನ್ನು ತಡೆಯಲಾಗಿದೆ ಎಂದು ತಿಳಿಸಿವೆ.
ತನ್ನ ವಿರುದ್ಧದ ಲುಕ್-ಔಟ್ ಸುತ್ತೋಲೆಯನ್ನು ರದ್ದುಗೊಳಿಸುವಂತೆ ಸಿಬಿಐಗೆ ನಿರ್ದೇಶ ಕೋರಿ ಪಟೇಲ್ ಅವರು ಮಧ್ಯಾಹ್ನ ದಿಲ್ಲಿಯ ಸಿಬಿಐ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮಿಚಿಗನ್,ಬರ್ಕ್ಲಿ ಮತ್ತು ನ್ಯೂಯಾರ್ಕ್ ವಿವಿಗಳಲ್ಲಿ ಉಪನ್ಯಾಸಗಳನ್ನು ನೀಡಲು ತನ್ನ ಅಮೆರಿಕ ಪ್ರಯಾಣಕ್ಕೆ ಅನುಮತಿ ನೀಡುವಂತೆಯೂ ಪಟೇಲ್ ಅರ್ಜಿಯಲ್ಲಿ ಕೋರಿಕೊಂಡಿದ್ದಾರೆ.
ಪಟೇಲ್ ಅರ್ಜಿ ಕುರಿತು ಸಿಬಿಐಗೆ ನೋಟಿಸ್ ಹೊರಡಿಸಿರುವ ಪವನ್ ಕುಮಾರ್ ಅವರು ಗುರುವಾರದೊಳಗೆ ಉತ್ತರ ಸಲ್ಲಿಸುವಂತೆ ಸೂಚಿಸಿದೆ. ನ್ಯಾಯಾಲಯವು ನಾಳೆ ಬೆಳಿಗ್ಗೆ 10 ಗಂಟೆಗೆ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಎಫ್ಸಿಆರ್ಎ ಮತ್ತು ಐಪಿಸಿಯ ಉಲ್ಲಂಘನೆಗಳ ಕುರಿತು ಗೃಹ ಸಚಿವಾಲಯವು ಸಲ್ಲಿಸಿದ್ದ ದೂರಿನ ಮೇರೆಗೆ ಸಿಬಿಐ ನವಂಬರ್ 2019ರಲ್ಲಿ ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಮತ್ತು ಅದರ ಸಹಸಂಸ್ಥೆಗಳಾದ ಆಮ್ನೆಸ್ಟಿ ಇಂಟರ್ನ್ಯಾಷನಲ್ ಟ್ರಸ್ಟ್, ಆಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಫೌಂಡೇಷನ್ ಟ್ರಸ್ಟ್ ಮತ್ತು ಆಮ್ನೆಸ್ಟಿ ಇಂಟರ್ನ್ಯಾಷನಲ್ ಸೌತ್ ಏಶ್ಯ ಫೌಂಡೇಷನ್ ಮತ್ತು ಇತರರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿತ್ತು.
ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2018ರಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಆಮ್ನೆಸ್ಟಿಯ ಬೆಂಗಳೂರು ಕಚೇರಿಗಳ ಮೇಲೆ ದಾಳಿ ನಡೆಸಿತ್ತು.
2016ರಲ್ಲಿ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಚರ್ಚೆಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಮ್ನೆಸ್ಟಿ ಸಮೂಹದ ವಿರುದ್ಧ ದೇಶದ್ರೋಹ ಆರೋಪಗಳನ್ನು ಹೊರಿಸಲಾಗಿತ್ತಾದರೂ,ಬಳಿಕ ಅವುಗಳನ್ನು ಕೈಬಿಡಲಾಗಿತ್ತು.
— Aakar Patel (@Aakar__Patel) April 6, 2022







