ಜೋಧ್‍ಪುರ್ ಡಿಸ್ಕಾಂನಿಂದ ರಮಝಾನ್ ವೇಳೆ ನಿರಂತರ ವಿದ್ಯುತ್ ಪೂರೈಕೆ ಆದೇಶ: ಸರಕಾರ ವಿರುದ್ಧ ಕಿಡಿಕಾರಿದ ಬಿಜೆಪಿ

ಜೈಪುರ್: ರಮಝಾನ್ ತಿಂಗಳ ಉಪವಾಸ ಆಚರಣೆ ವೇಳೆ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಜೋಧ್‍ಪುರ್ ಡಿಸ್ಕಾಂ ಹೊರಡಿಸಿದ ಆದೇಶವೊಂದಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
ರಮಝಾನ್ ಉಪವಾಸ ಆಚರಣೆ ವೇಳೆ ಸಮಸ್ಯೆಯಾಗದೇ ಇರಲಿ ಎಂಬ ಉದ್ದೇಶದಿಂದ ಜೋಧ್‍ಪುರ್ ಡಿಸ್ಕಾಂ ನಿರಂತರ ವಿದ್ಯುತ್ ಪೂರೈಕೆಗೆ ಆದೇಶ ಹೊರಡಿಸಿತ್ತು. ಆದರೆ ಈ ಕುರಿತು ಸಾಮಾಜಿಕ ಜಾಲತಾಣಿಗರಿಂದ ಟೀಕೆಯ ನಂತರ ತನ್ನ ಮೊದಲಿನ ಆದೇಶಕ್ಕೆ ತಿದ್ದುಪಡಿ ತಂದ ಡಿಸ್ಕಾಂ ಈ ತಿಂಗಳು ಆಚರಿಸಲಾಗುವ ಇತರ ಹಬ್ಬಗಳನ್ನೂ ಉಲ್ಲೇಖಿಸಿದೆ.
ಕ್ರಮವನ್ನು ಟೀಕಿಸಿ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಡಾ ಸತೀಶ್ ಪುಣಿಯಾ ಮಾತನಾಡಿ "ರಾಜಸ್ಥಾನ ಸರಕಾರ ಓಲೈಕೆ ರಾಜಕಾರಣದಲ್ಲಿ ತೊಡಗಿದೆ. ರಮಝಾನ್ ಎಂದು ಉಲ್ಲೇಖಿಸುವ ಅಗತ್ಯವೇನಿತ್ತು? ದೀಪಾವಳಿ, ಹೋಳಿ ಸಂದರ್ಭ ಇಂತಹ ಆದೇಶ ನಿಡಲಾಗುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ ಟೀಕೆಗಳಿಗೆ ಪ್ರತಿಕ್ರಿಯಿಸಿದ ರಾಜಸ್ಥಾನ ಸಚಿವ ಪ್ರತಾಪ್ ಸಿಂಗ್ ಖಸರಿಯವಸ್, "ಬಿಜೆಪಿ ಸುಳ್ಳು ಮತ್ತು ವಂಚನೆಯಲ್ಲಿ ತೊಡಗಿದೆ. ಅದು ಹಿಂದುಗಳು, ಮುಸ್ಲಿಮರು, ಸಿಖರು ಮತ್ತು ಕ್ರೈಸ್ತರ ನಡುವೆ ಒಡಕು ಸೃಷ್ಟಿಸುತ್ತಿದೆ. ಜನರು ಉದ್ಯೋಗ ಕುರಿತು ಮಾತನಾಡಿದರೆ ಬಿಜೆಪಿ ಇಂತಹ ವಿಚಾರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ" ಎಂದಿದ್ದಾರೆ.







