ನಿಯಮ ಮೀರಿ ಧ್ವನಿವರ್ಧಕ ಬಳಕೆಗೆ ತಡೆ; 1001 ಸ್ಥಳಗಳಿಗೆ ನೋಟೀಸು: ಮಂಗಳೂರು ಕಮಿಷನರ್ ಶಶಿಕುಮಾರ್

ಮಂಗಳೂರು : ನಿಯಮ ಮೀರಿ ಧ್ವನಿವರ್ಧಕ ಬಳಕೆಗೆ ತಡೆಯಲು ಮಂಗಳೂರು ನಗರದಲ್ಲಿ 1001 ಸ್ಥಳಗಳಿಗೆ ನೋಟೀಸು ನೀಡಲಾಗಿದೆ ಎಂದು ಕಮಿಷನರ್ ಎನ್ .ಶಶಿಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ 357 ದೇವಸ್ಥಾನ, 168 ಮಸೀದಿ, 95 ಚರ್ಚ್, 106 ಶಿಕ್ಷಣ ಸಂಸ್ಥೆಗಳು, 60 ಕೈಗಾರಿಕಾ ಸ್ಥಳ ಗಳು, 98 ಮನರಂಜನಾ ಸ್ಥಳ ಸೇರಿದಂತೆ 1001 ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಯಾಗುತ್ತಿರುವುದನ್ನು ಈಗಾಗಲೇ ಗುರುತಿಸಲಾಗಿದ್ದು, ನಿನ್ನೆಯಿಂದ ನೋಟೀಸು ನೀಡುವ ಕ್ರಮ ಆರಂಭಿಸಲಾಗಿದೆ. ವಿವಿಧ ಸ್ಥಳ ಗಳಲ್ಲಿ ಧ್ವನಿವರ್ಧಕ ಬಳಕೆಗೆ ನಿಯಮವಿದ್ದು, ಬೆಳಗ್ಗೆ ಮತ್ತು ಸಂಜೆ ಹೊತ್ತು ಧ್ವನಿವರ್ಧಕದ ಶಬ್ಧ ಇಂತಿಷ್ಟು ಡೆಸಿಮಲ್ ಗಿಂತ ಮೀರಬಾರದು ಎಂಬ ನಿಯಮವಿದ್ದು ಅದನ್ನು ಪಾಲಿಸುವಂತೆ ಸೂಚಿಸಿ ನೋಟೀಸು ನೀಡಲಾಗುತ್ತಿದೆ.
ಉಲಂಘಿಸಿದರೆ ಮುಂದಿನ ಕಾನೂನು ಕ್ರಮ ವಹಿಸುವ ಸೂಚನೆ ನೀಡಲಾಗಿದೆ. ಸರಕಾರ ಹಾಗೂ ಕೋರ್ಟ್ ಆದೇಶದ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಮಿಷನರ್ ತಿಳಿಸಿದರು.
ಸರಕಾರದ ಆದೇಶ ಹಾಗೂ ಹೈಕೋರ್ಟ್ ನಿರ್ದೇಶನದ ಪ್ರಕಾರ ಮಂಗಳೂರು ನಗರದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಆಝಾನ್ ಗೆ ಸಂಬಂಧಿಸಿ ಕೇವಲ ಮಸೀದಿಗಳನ್ನು ಗುರಿಯಾಗಿಸಿ ಪೊಲೀಸರು ನೋಟೀಸು ನೀಡುತ್ತಿದ್ದಾರೆ ಎಂಬುದು ತಪ್ಪುಗ್ರಹಿಕೆ. ಈ ರೀತಿ ಅಪಪ್ರಚಾರ ನಡೆಯುತ್ತಿರುವುದಕ್ಕೆ ಈ ಸ್ಪಷ್ಟನೆ ನೀಡುತ್ತಿರುವುದಾಗಿ ಕಮಿಷನರ್ ಹೇಳಿದರು.








