ಗೌರಿಪಾಳ್ಯದಲ್ಲಿ ಯುವಕನ ಕೊಲೆ ಪ್ರಕರಣ; ಗೃಹ ಸಚಿವರ ಹೇಳಿಕೆಗೆ ಕುಮಾರಸ್ವಾಮಿ ಆಕ್ರೋಶ

ಮೈಸೂರು: ಬೆಂಗಳೂರಿನ ಗೌರಿಪಾಳ್ಯದಲ್ಲಿ ಯುವಕನ ಕೊಲೆಯ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದಿಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಗೃಹ ಸಚಿವರು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಚುಚ್ಚಿಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಪ್ರಚೋದಾನಾತ್ಮಕ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರೇ ಹೀಗೆ ಹೇಳಿಕೆ ಕೊಟ್ಟರೆ ಹೇಗೆ? ಅರೆಬರೆ ಮಾಹಿತಿ ಇಟ್ಟುಕೊಂಡು ಅತ್ಯಂತ ಬೇಜವಾಬ್ದಾರಿಯಿಂದ ಅವರು ಹೇಳಿಕೆ ನೀಡಿದ್ದಾರೆ” ಎಂದರು.
ಈ ಹತ್ಯೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಬಂಧಿಸಿ ಕಠಿಣ ಸೆಕ್ಷನ್ʼಗಳನ್ನು ಹಾಕಿ ಶಿಕ್ಷೆಯಾಗುವಂತೆ ಮಾಡಬೇಕು. ಅದನ್ನು ಹೊರತುಪಡಿಸಿ ಅದನ್ನು ವಿವಾದವನ್ನಾಗಿ ಪರಿವರ್ತಿಸುವ ಹುನ್ನಾರ ಮಾಡುವುದು ಬೇಡ ಎಂದು ಅವರು ಒತ್ತಾಯ ಮಾಡಿದರು.
ʼಸಚಿವರು ಹಿಂದೂ ಯುವಕ ಎನ್ನಲಿಲ್ಲʼ
ಕೊಲೆಯಾದ ಯುವಕನ್ನು ʼದಲಿತ ಯುವಕʼ ಎಂದು ಕರೆದ ಗೃಹ ಸಚಿವರು, ಎಲ್ಲಿಯೂ ಆತನನ್ನು ʼಹಿಂದೂ ಯುವಕʼ ಎಂದು ಕರೆಯಲಿಲ್ಲ. ಇದು ಏನನ್ನು ಸೂಚಿಸುತ್ತದೆ? ದಲಿತ ಯುವಕ ಹಿಂದೂ ಅಲ್ಲವೇ? ಯಾಕೆ ಈ ತಾರತಮ್ಯ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಪ್ರತಿಯೊಂದು ವಿಚಾರವನ್ನು ಬಿಜೆಪಿಯವರು ರಾಜಕೀಕರಣಗೊಳಿಸುತ್ತಿದ್ದಾರೆ. ದಲಿತ ಯುವಕ ಕೊಲೆ ಆಗಿದ್ದಾನೆ ಎಂದು ಹೇಳುತ್ತಾ ಸಾಮರಸ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಪೋಲಿಸರು ಒಂದು ಹೇಳಿಕೆ ಕೊಟ್ಟರೆ, ಗೃಹ ಸಚಿವರು ಮತ್ತೊಂದು ಹೇಳಿಕೆ ಕೊಡುತ್ತಿದ್ದಾರೆ. ಯಾರ ಮಾತು ಸತ್ಯ? ಯಾರ ಮಾತು ಸುಳ್ಳು? ಜವಾಬ್ದಾರಿ ಸ್ಥಾನದಲ್ಲಿರುವ ಗೃಹ ಸಚಿವರು ಎಲ್ಲ ಮಾಹಿತಿಯನ್ನು ಪಡೆದುಕೊಂಡು ಮಾತನಾಡಬೇಕು. ಅದನ್ನು ಬಿಟ್ಟು ಹೊಣೆಗೇಡಿತನದಿಂದ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಅವರು ಇಲ್ಲಿ ಕಾಮಿಡಿ ಮಾಡಲು ಬಂದಿದ್ದಾರಾ? ಇಷ್ಟೆಲ್ಲ ನಡೆಯುತ್ತಿದ್ದರೂ ಮುಖ್ಯಮಂತ್ರಿ ಮೌನವಾಗಿರುವುದು ಸರಿಯಲ್ಲ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.
ಸಿನಿಮಾಗಳೇ ಪ್ರೇರಣೆ
ನಿನ್ನೆ ನಡೆದಿರುವ ಇಂಥ ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಹಿಂಸಾತ್ಮಕ ಘಟನೆಗಳಿಗೆ ಇತ್ತೀಚೆಗೆ ಬರುತ್ತಿರುವ ಸಿನಿಮಾಗಳೇ ಪ್ರೇರಣೆ. ಈ ಬಗ್ಗೆ ಸಿನಿಮಾ ನಿರ್ಮಾಪಕರುಗಳು ಎಚ್ಚರಿಕೆ ವಹಿಸಬೇಕು. ಕೊಲೆ ಸುಲಿಗೆಗಳಿಗೆ ಪ್ರೇರಣೆ ನೀಡುವ ಸಿನಿಮಾ ಮಾಡಬೇಡಿ ಎಂದು ಅವರು ಅಭಿಪ್ರಾಯಪಟ್ಟರು.
ಕಾಶ್ಮೀರ ಫೈಲ್‌ಗೂ ಈ ಘಟನೆಗೂ ಸಂಬಂಧ ಇಲ್ಲ. ಪ್ರತಿನಿತ್ಯವೂ ಕೊಲೆಗಳಾಗುತ್ತಿವೆ. ಕಾರಣ, ನಮ್ಮಲ್ಲಿ ಬಾಂಧವ್ಯದ ಬಾಂಡಿಗ್ ನಶಿಸಿ ಹೋಗುತ್ತಿದೆ. ಅದಕ್ಕೆ ಇಂಥ ಘಟನೆಗಳು ಹೆಚ್ಚಾಗುತ್ತಲೇ ಇವೆ. ಆದರೆ, ಈ ಯುವಕನ ಕೊಲೆಯನ್ನು ಭಾಷೆ, ಧರ್ಮದ ಹಿನ್ನೆಲೆಯಲ್ಲಿ ತಿರುಚುವ ಮೂಲಕ ಇದರಲ್ಲೂ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.







