ಉರ್ದು ಮಾತನಾಡದ್ದಕ್ಕೆ ಹಲ್ಲೆ ಎನ್ನುವುದು ಸುಳ್ಳುಸುದ್ದಿ: ಕರ್ನಾಟಕ ಪೊಲೀಸರಿಂದಲೇ ʼಫ್ಯಾಕ್ಟ್ ಚೆಕ್ʼ

ಸಾಂದರ್ಭಿಕ ಚಿತ್ರ
ಗೋರಿಪಾಳ್ಯದಲ್ಲಿ ನಡೆದಿದ್ದ ಚಂದ್ರು ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಕೆಲವು ಕನ್ನಡ ಮಾಧ್ಯಮಗಳು ಕೋಮು ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದು ಮತ್ತು ಸುದ್ದಿಯನ್ನು ಬಿತ್ತರಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಉರ್ದು ಮಾತನಾಡದ್ದಕ್ಕೆ ಯುವಕನನ್ನು ಕೊಲೆ ಮಾಡಲಾಗಿದೆ ಎಂಬರ್ಥದಲ್ಲಿ ಸುದ್ದಿ ಬಿತ್ತರಿಸಲಾಗಿತ್ತು. ಇದೀಗ ಈ ಕುರಿತು ಕರ್ನಾಟಕ ಪೊಲೀಸ್ ಅಧಿಕೃತ ವೆಬ್ ಸೈಟ್ ನಲ್ಲಿ ಸತ್ಯಶೋಧನಾ ವರದಿಯನ್ನು ಪ್ರಕಟಿಸಲಾಗಿದೆ.
"ಮುಸ್ಲಿಂ ಏರಿಯಾಗೆ ಬಂದು ಉರ್ದು ಮಾತನಾಡಿಲ್ಲ ಅಂತಾ ಕೊಂದ ಕಿರಾತಕರು ಎಂಬ ನ್ಯೂಸ್ ಕ್ಲಿಪ್ ನ ಬಗ್ಗೆ ಸತ್ಯ ಸಂಗತಿಗಳು" ಎಂಬ ತಲೆಬರಹದಲ್ಲಿ ಸುದ್ದಿಯನ್ನು ಪ್ರಕಟಿಸಲಾಗಿದೆ. ಕಸ್ತೂರಿ ನ್ಯೂಸ್ 24 ಪ್ರಕಟಿಸಿರುವ ಈ ನ್ಯೂಸ್ ಸುಳ್ಳಾಗಿದ್ದು, ಇದನ್ನು ಹಲವು ಕಿಡಿಗೇಡಿಗಳು ಸಾಮಾಜಿಕ ತಾಣದಲ್ಲಿ ಹಬ್ಬಿಸಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದು ಸುದ್ದಿಯಲ್ಲಿ ಉಲ್ಲೇಖಿಸಲಾಗಿದೆ.
ಜೊತೆಗೆ, ಮೀರಾ ರಾಘವೇಂದ್ರ ಎಂಬಾಕೆಯ ಪೋಸ್ಟರ್ ಕುರಿತೂ ಸುದ್ದಿಯಲ್ಲಿ ಉಲ್ಲೇಖಿಸಲಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ರೀತಿಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸರಿಯಾಗಿ ಪರಿಶೀಲಿಸದೇ ಈ ರೀತಿ ಸುಳ್ಳುಸುದ್ದಿಗಳನ್ನು ಹರಡಬಾರದು ಎಂದು ಕರ್ನಾಟಕ ಪೊಲೀಸ್ ಈ ಸುದ್ದಿಯಲ್ಲಿ ಎಚ್ಚರಿಕೆ ನೀಡಿದೆ.
ಸುಳ್ಳು ಸುದ್ದಿ ಹರಡಿದ ಮಹಿಳೆ ಮೇಲೆ ಕ್ರಮಕ್ಕೆ ಆಗ್ರಹ
ಅನ್ಯಭಾಷೆ ಫಲಕಗಳಿಗೆ ಮಸಿ ಬಳಿಯುತ್ತೀರಾ, ಸಂತೋಷ, ಆದರೆ, ಇವತ್ತು ಕನ್ನಡಿಗರ ಉಳಿವು ನಿಮ್ಮಿಂದಲೇ, ಉರ್ದು ಮಾತನಾಡದಿದಕ್ಕೆ ಕೊಲೆಯಾಗಿದ್ದಾನೆ ಎಂದು ಮೀರಾ ರಾಘವನ್ ಎಂಬಾಕೆ, ಚಂದ್ರು ಭಾವಚಿತ್ರ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಂಬಂಧ ತಪ್ಪು ಸಂದೇಶ ರವಾನೆ ಮಾಡಿರುವ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ.
ಆಯುಕ್ತರು ಹೇಳಿದ್ದೇನು?
ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎ.4ರ ಮಧ್ಯರಾತ್ರಿ ನಡೆದ ಕೊಲೆ ಪ್ರಕರಣ ಸಂಬಂಧ ಸೈಮನ್ರಾಜ್ ಮತ್ತು ಚಂದ್ರು ಇಬ್ಬರು ಮೈಸೂರು ರಸ್ತೆಯಲ್ಲಿ ಊಟಕ್ಕೆ ತೆರಳಿ ಹಿಂದಿರುಗುವಾಗ ಇವರ ಬೈಕ್, ಶಾಹಿದ್ ಚಾಲನೆ ಮಾಡುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ. ಪರಸ್ಪರ ಮಾತು ಜಗಳಕ್ಕೆ ತಿರುಗಿ ಗಲಾಟೆಗೆ ಕಾರಣವಾಗಿದ್ದು, ಈ ಗಲಾಟೆಗೆ ಇತರರು ಸೇರಿಕೊಂಡಿದ್ದಾರೆ.
ಗಲಾಟೆಯ ಸಂದರ್ಭದಲ್ಲಿ ಶಾಹಿದ್ ಚಂದ್ರುವಿನ ಬಲ ತೊಡೆಗೆ ಇರಿದು ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿ, ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ.
-ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ







