ಸ್ವಾತಂತ್ರ್ಯ ಹೋರಾಟಕ್ಕೆ ತುಳುನಾಡಿನಲ್ಲಿ ಮುನ್ನುಡಿ : ದಯಾನಂದ ಕತ್ತಲ್‌ಸಾರ್

ಮಂಗಳೂರು : ವೀರಪುರುಷರು ನಮ್ಮ ತುಳುನಾಡಿನವರಾಗಿದ್ದಾರೆ, ಅವರ ತ್ಯಾಗವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ಇಂದು ಎಷ್ಟೋ ಮಂದಿಗೆ ಈ ವಿಷಯವೇ ತಿಳಿದಿಲ್ಲ ಈ ಬಗ್ಗೆ ತುಳುನಾಡಿನ ಜನತೆ ಕ್ರಾಂತಿ ವೀರರನ್ನು ಸ್ಮರಿಸಬೇಕು, ಮುಂದಿನ ದಿನದಲ್ಲಿ ಈ ಕ್ರಾಂತಿವೀರರನ್ನು ರಂಗಭೂಮಿಯ ಮೂಲಕ ಕನ್ನಡ, ತುಳು, ಹಿಂದಿ ಭಾಷೆಯಲ್ಲಿ ಪರಿಚಯಿಸಿ ಅವರ ಹೋರಾಟದ ಚಿತ್ರಣವನ್ನು ನೀಡುವ ಕಲ್ಪನೆ ತುಳು ಅಕಾಡಮಿಯಿಂದ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಹೇಳಿದರು.
ನಗರ ಹೊರವಲಯದ ಬಿಕರ್ನಕಟ್ಟೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಜಂಟಿ ಸಂಯೋಜನೆಯಲ್ಲಿ ಪ್ರಥಮ ತುಳುನಾಡ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿ ವೀರರನ್ನು ಸ್ಮರಿಸುವ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತುಳುನಾಡಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಕ್ರಾಂತಿ ವೀರರ ವಂಶಸ್ಥರಾಗಿರುವ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರು ಅಂದಿನ ಹೋರಾಟದ ಬಗ್ಗೆ ಸ್ಮರಿಸಿಕೊಂಡರು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಕಾವ್ಯ ನಟರಾಜ್ ಆಳ್ವಾ ತುಳುನಾಡಿನ ಮಾತೃಶ್ರೀ ಅವರ ರಥವನ್ನು ಅನಾವರಣಗೊಳಿಸಿದರು. ರಥವು ಬಿಕರ್ನಕಟ್ಟೆಯಿಂದ ಮಂಗಳೂರಿನ ಬಾವುಟಗುಡ್ಡೆಯವರೆಗೆ ಮೆರವಣಿಗೆಯ ಮೂಲಕ ಸಾಗಿತು.
ಶಾಸಕ ವೇದವ್ಯಾಸ ಕಾಮತ್ ಧ್ವಜಾರೋಹನಗೈದರು. ಮೇಯರ್ ಪ್ರೇಮಾನಂದ ಶೆಟ್ಟಿ, ತುಳು ಅಕಾಡಮಿಯ ಸದಸ್ಯರಾದ ನಾಗೇಶ್ ಕುಲಾಲ್ ಕುಳಾಯಿ, ದಿನೇಶ್ ರೈ ಕಡಬ, ಮಲ್ಲಿಕಾ ಅಜಿತ್‌ಕುಮಾರ್ ಶೆಟ್ಟಿ, ರಿಜಿಸ್ಟ್ರಾರ್ ಕವಿತಾ ಮತ್ತಿತರರು ಉಪಸ್ಥಿತರಿದ್ದರು.
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪುಸ್ವಾಗತಿಸಿದರು, ಪ್ರಶಾಂತ್ ಭಟ್ ಕಡಬ ವಂದಿಸಿದರು. ಸದಸ್ಯ ಸಂಚಾಲಕ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.