ವಿದ್ಯುತ್ ದರ ಏರಿಕೆ ಬೆನ್ನಲ್ಲೇ ‘ನಂದಿನಿ ಹಾಲಿನ ದರ ಏರಿಕೆ' ಸಾಧ್ಯತೆ

ಬೆಂಗಳೂರು, ಎ. 6: ‘ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ, ವಿದ್ಯುತ್ ದರ ಏರಿಕೆ ಮಧ್ಯೆಯೇ ಜನಸಾಮಾನ್ಯರಿಗೆ ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆ ಬಿಸಿಯೂ ತಟ್ಟಲಿದೆ.
ಒಂದು ತಿಂಗಳಿನಿಂದ ನಂದಿನಿ ಹಾಲಿನ ದರ ಏರಿಕೆಗೆ ಆಗ್ರಹಿಸಿ ಹಾಲು ಒಕ್ಕೂಟಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಲಿದ್ದು ಪ್ರತಿ ಲೀಟರ್ ಹಾಲಿನ ದರವನ್ನು ಕನಿಷ್ಠ 5 ರೂ. ಏರಿಕೆ ಮಾಡಬೇಕೆಂದು ಹಾಲು ಒಕ್ಕೂಟಗಳು ಕೋರಿಕೆ ಸಲ್ಲಿಸಲಿವೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿ ಪ್ರವಾಸದಲ್ಲಿದ್ದು, ಎ.10ರೊಳಗೆ ಅವರನ್ನು ಭೇಟಿಯಾಗಿ, ದರ ಏರಿಕೆ ಪ್ರಸ್ತಾವನೆಯನ್ನು ಒಕ್ಕೂಟಗಳು ಸಲ್ಲಿಕೆ ಮಾಡಲಿವೆ. ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹಾಲು ಒಕ್ಕೂಟಗಳು ಪ್ರತಿ ಲೀಟರ್ ಗೆ 5 ರೂ.ಏರಿಕೆ ಮಾಡಲು ಮನವಿ ಮಾಡಿವೆ. ಆದರೆ, ಸಿಎಂ ಮುಂದೆ ಪ್ರತಿ ಲೀಟರ್ ಗೆ 2 ರೂ.ಏರಿಕೆ ಮಾಡುವ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುತ್ತದೆ. ಹಾಲು ಒಕ್ಕೂಟಗಳಿಗೆ ಉಂಟಾಗಿರುವ ನಷ್ಟ ಮತ್ತು ನಿರ್ವಹಣಾ ವೆಚ್ಚಗಳು ಅಧಿಕವಾಗಿರುವ ಕಾರಣ ಹಾಲು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲು ತಯಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಕೆಎಂಎಫ್ ನಾಲ್ಕೈದು ತಿಂಗಳಿನಿಂದ ಹಾಲಿನ ದರ ಏರಿಕೆಗೆ ಪ್ರಯತ್ನ ನಡೆಸಿದೆ. ಆದರೆ ಸರಕಾರದ ಕಡೆಯಿಂದ ಒಪ್ಪಿಗೆ ಸಿಕ್ಕಿಲ್ಲ. ಈಗ ವಿದ್ಯುತ್ ದರವೂ ಏರಿಕೆಯಾದ ಬಳಿಕ ಹಾಲು ಒಕ್ಕೂಟಗಳ ಮುಖ್ಯಸ್ಥರು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭೇಟಿ ಮಾಡಿದ್ದಾರೆ. ಅಧ್ಯಕ್ಷರು ಎ.10ರೊಳಗೆ ಸಿಎಂ ಅವರನ್ನು ಖುದ್ದು ಭೇಟಿ ಮಾಡಿ ಪರಿಸ್ಥಿತಿ ವಿವರ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.







