ಎ.8ರಿಂದ ‘ನಮ್ಮ ಅಂಗಡಿ’ ಪ್ರದರ್ಶನ- ಮಾರಾಟ ಮೇಳ
ಉಡುಪಿ, ಎ.೬: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂಐಸಿ) ಸ್ನಾತಕೋತ್ತರ ವಿಭಾಗದ ವತಿಯಿಂದ ಕುಂದಾಪುರದ ನಮ್ಮ ಭೂಮಿ ಮತ್ತು ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಹಯೋಗದಲ್ಲಿ ‘ನಮ್ಮ ಅಂಗಡಿ’ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಎ.೮ರಿಂದ ೧೦ರವರೆಗೆ ಮಣಿಪಾಲ ಎಂಐಸಿ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.
ನಮ್ಮ ಅಂಗಡಿ, ಗ್ರಾಮೀಣ ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಟ ಮಾಡಲು ಮತ್ತು ಅವರ ಕೌಶಲ್ಯವನ್ನು ಪ್ರದರ್ಶಿಸುವ ವೇದಿಕೆಯಾಗಿದ್ದು, ಇಲ್ಲಿ ಆವೆಮಣ್ಣಿನ ಕಲಾಕೃತಿ, ಜೂಟ್, ಶಿಲೆ, ಕರಕುಶಲ ಸೇರಿದಂತೆ ೮೦೦ಕ್ಕೂ ಅಧಿಕ ವಿವಿಧ ರೀತಿಯ ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು ಎಂದು ಎಂಐಸಿಯ ಸಂಯೋಜಕಿ ಸೌಪರ್ಣಿಕ ಪಿ.ಅತ್ತಾವರ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಗೃಹಾಲಂಕಾರದಿಂದ ಹಿಡಿದು ಬೇಸಿಗೆ ಉಡುಪುಗಳವರೆಗೆ ವಿವಿಧ ಶ್ರೇಣಿಯ ಉತ್ಪನ್ನಗಳನ್ನು ಕೂಡ ಇಲ್ಲಿ ಪ್ರದರ್ಶಿಸಲಾಗುವುದು. ಈ ವರ್ಷ ಮೊದಲ ಬಾರಿಗೆ ಜೈಪುರಿ ಕಾಟನ್ ಮತ್ತು ಕಲಾಮಾರಿಯಂತಹ ಫ್ಯಾಬ್ರಿಕ್‌ನಿಂದ ಮಾಡಲಾದ ಮಕ್ಕಳ ಉಡುಪುಗಳನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರದರ್ಶನವನ್ನು ಎ.೮ ರಂದು ಬೆಳಗ್ಗೆ ೯.೩೦ಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಉದ್ಘಾಟಿಸ ಲಿರುವರು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಂಐಸಿಯ ಕಾರ್ಪೊರೇಟ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಡಾ.ಪದ್ಮಕುಮಾರ್ ಕೆ., ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್‌ನ ಸಹಾಯಕ ನಿರ್ದೇಶಕ ಶಿವಾನಂದ ಶೆಟ್ಟಿ, ಉಸ್ತುವಾರಿ ದಿನೇಶ್, ಪ್ರಾಜೆಕ್ಟ್ ಮೆನೇಜರ್ ಷಣ್ಮುಖ ಅನಘ ಉಪಸ್ಥಿತರಿದ್ದರು.