ಸರಕಾರಗಳ ಆಡಳಿತ ವೈಫಲ್ಯ ಮುಚ್ಚಲು ಸಂಘಪರಿವಾರದಿಂದ ಕೋಮುಗಲಭೆ ಸೃಷ್ಟಿಗೆ ಹುನ್ನಾರ: ಎಚ್.ಎಚ್. ದೇವರಾಜ್ ಆರೋಪ
ಚಿಕ್ಕಮಗಳೂರು, ಎ.6: ಪೆಟ್ರೋಲ್, ಅಡುಗೆ ಅನಿಲ, ಅಡುಗೆ ಎಣ್ಣೆ, ರಸಗೊಬ್ಬರ, ವಿದ್ಯುತ್ ಬೆಲೆ ಏರಿಕೆಯಿಂದಾಗಿ ರಾಜ್ಯದ ಜನರು ಸಂಕಷ್ಟಕ್ಕೆ ತುತ್ತಾಗಿದ್ದರೂ ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತದೇ ಹಿಜಾಬ್, ಜಾತ್ರೆ ವ್ಯಾಪಾರಲ್ಲಿ ಅನ್ಯ ಧರ್ಮದವರಿಗೆ ನಿಷೇಧ, ಹಲಾಲ್, ಆಝಾನ್ ಎನ್ನುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾ ಬೇಜವಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೊಧಿ ನೀತಿಗಳ ವಿರುದ್ಧ ಕಾಂಗ್ರೆಸ್ ಪಕ್ಷ ನಿರಂತರ ಹೋರಾಟ ರೂಪಿಸಲಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿನ ಮೋದಿ ಸರಕಾರ ಅಚ್ಛೇದಿನ್ ತರುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದು, ಅವರ ಆಡಳಿತದಿಂದಾಗಿ ದೇಶದಲ್ಲಿ ಇದುವರೆಗೂ ಇದ್ದ ಅಚ್ಛೇದಿನ್ ಮಾಯವಾಗಿ ಕರಾಳ ದಿನಗಳನ್ನು ಜನತೆ ನೋಡುತ್ತಿದ್ದಾರೆ. ಮೋದಿ ಸರಕಾರದ ಆರ್ಥಿಕ ನೀತಿಗಳಿಂದಾಗಿ ದೇಶದ ಜನರು ಬೆಲೆ ಏರಿಕೆಯ ಸಂಕಷ್ಟದಿಂದ ಜೀವನ ನಡೆಸಲು ಪರದಾಡುತ್ತಿದ್ದಾರೆ. ಕಳೆದೊಂದು ವಾರದಲ್ಲಿ ಪೆಟ್ರೋಲ್ ಬೆಲೆ 10-11 ರೂ.ನಷ್ಟು ಹೆಚ್ಚಾಗಿದೆ. ಪ್ರತೀ ರಸಗೊಬ್ಬರಗಳ ಬೆಲೆಯಲ್ಲಿ 150-ರಿಂದ 200 ರೂ. ಹೆಚ್ಚಳ ಮಾಡಲಾಗಿದೆ. ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರಿದ್ದು, ಜನರು ಎಣ್ಣೆ ಖರೀದಿಯನ್ನೇ ನಿಲ್ಲಿಸಿದ್ದಾರೆ. ಅಡುಗೆ ಅನಿಲದ ಬೆಲೆಯಲ್ಲೂ ಏರಿಕೆಯಾಗಿದೆ. ಈ ಮಧ್ಯೆ ರಾಜ್ಯ ಸರಕಾರ ವಿದ್ಯುತ್ ಬೆಲೆ ಏರಿಕೆ ಮಾಡಿ ಜನರ ಗಾಯದ ಮೇಲೆ ಬರೆ ಎಳೆದಿದೆ. ಇದು ಬಿಜೆಪಿ ಸರಕಾರದ ದುರಾಡಳಿತದ ಪರಮಾವಧಿ ಎಂದು ಟೀಕಿಸಿದರು.
ಬಿಜೆಪಿ ಸರಕಾರಗಳ ಸಂಸದರು, ಮಂತ್ರಿಗಳು, ಶಾಸಕರು ಜನರ ನೈಜ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದನ್ನು ಬಿಟ್ಟು ಹಿಜಾಬ್, ಹಲಾಲ್, ವ್ಯಾಪಾರ ನಿಷೇಧ, ಆಜಾನ್ ನಿಷೇಧ ಎನ್ನುತ್ತಾ ದೇಶದ ಸೌಹಾರ್ದ ಪರಂಪರೆಗೆ ಧಕ್ಕೆ ತರುತ್ತಿದ್ದಾರೆ. ಕೋಮು ಭಾವನೆಗಳನ್ನು ಕೆರಳಿಸುವಂತಹ ಹೇಳಿಕೆ ನೀಡುವ ಮೂಲಕ ಸಾರ್ವಜನಿಕರು ಸರಕಾರಗಳ ಜನವಿರೋಧಿ ಆಡಳಿತದ ವಿರುದ್ಧ ಧ್ವನಿ ಎತ್ತದಂತೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್, ರಸಗೊಬ್ಬರ, ವಿದ್ಯುತ್ ಬೆಲೆ ಏರಿಕೆಯಿಂದಾಗಿ ರೈತರು ಭಾರೀ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ದೇಶಕ್ಕೆ ಅನ್ನ ನೀಡುವ ರೈತರು ಬೆಲೆ ಏರಿಕೆ, ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೇ ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ದಾರಿ ತುಳಿಯುವಂತಾಗಿದೆ. ಜನಸಾಮಾನ್ಯರ ಪಾಡಂತೂ ಹೇಳತೀರದಾಗಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಕೋಮು ಭಾವನೆಗಳನ್ನು ಕೆರಳಿಸುವಂತಹ ವಿಚಾರಗಳನ್ನು ಬದಿಗಿಟ್ಟು ಬೆಲೆ ಏರಿಕೆ ನಿಯಂತ್ರಣದಂತಹ ಜನರ ಬದುಕಿನ ವಿಚಾರದ ಬಗ್ಗೆ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ ಅವರು, ಕಾಂಗ್ರೆಸ್ ಜಾತ್ಯತೀತ ಪಕ್ಷವಾಗಿದ್ದು, ಸಮಾಜದಲ್ಲಿ ಯಾವುದೇ ಸಮುದಾಯ, ಧರ್ಮದವರ ನೆಮ್ಮದಿಗೆ ಭಂಗವಾದಲ್ಲಿ ಕಾಂಗ್ರೆಸ್ ಅದರ ವಿರುದ್ಧ ಹೋರಾಟಕ್ಕೆ ಮುಂದಾಗಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ರವೀಶ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಇದನ್ನು ಮರೆ ಮಾಚಲು ಬಿಜೆಪಿ, ಸಂಘಪರಿವಾರ, ಆರೆಸ್ಸೆಸ್ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಾ ಕೋಮುಗಲಭೆ ಸೃಷ್ಟಿಸಲು ಹುನ್ನಾರ ನಡೆಸುತ್ತಿದೆ. ಅನ್ಯಕೋಮಿನವರ ವ್ಯಾಪಾರಕ್ಕೆ ನಿಷೇಧ ಹೇರಿಕೆ ಬಳಿಕ ಸದ್ಯ ರೈತರು ಮುಸ್ಲಿಮರೊಂದಿಗೆ ವ್ಯಾಪಾರ ಸಂಬಂಧ ಇಟ್ಟುಕೊಳ್ಳದಂತೆ ಆಜ್ಞೆ ಹೊರಡಿಸಲಾಗುತ್ತಿದೆ. ಇಂತಹ ಕೋಮುಧ್ವೇಷದಿಂದ ಕೋಮುವಾದಿಗಳಿಗೆ ಯಾವುದೇ ನಷ್ಟ ಆಗಲ್ಲ. ಆದರೆ ರೈತರು ಭಾರೀ ನಷ್ಟ ಅನುಭವಿಸುತ್ತಾರೆ. ಇದು ಸಮಾಜದ ಸೌಹಾರ್ದ ಹಾಳು ಮಾಡುವ ಹುನ್ನಾರವಾಗಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ ಎಂದರು.
ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಅಡುಗೆ ಅನಿಲ ಹಾಗೂ ಅಡುಗೆ ಎಣ್ಣೆ ಬೆಲೆ ಏರಿಕೆಯಿಂದಾಗಿ ಗೃಹಿಣಿಯರು ಮನೆಗಳಲ್ಲಿ ಅಡುಗೆ ಮಾಡಲೂ ಆತಂಕಪಡುವಂತಾಗಿದೆ. ಉಜ್ವಲ ಯೋಜನೆಯಡಿ 10 ಕೋಟಿ ಜನರಿಗೆ ಉಚಿತ ಗ್ಯಾಸ್ ವಿತರಣೆ ಮಾಡಿ ಸದ್ಯ ಸಬ್ಸಿಡಿಯನ್ನೇ ನಿಲ್ಲಿಸಲಾಗಿದೆ. ಇದರಿಂದ ಬಡವರು ಮತ್ತೆ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದಾರೆ. ವಿದೇಶಗಳಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಖರೀದಿಸಿ ಅದನ್ನು ಹೆಚ್ಚು ಬೆಲೆಗೆ ದೇಶದ ಜನರಿಗೆ ಮಾರುತ್ತಾ ಕಾರ್ಪೋರೆಟ್ ಶಕ್ತಿಗಳಿಗೆ ಲಾಭ ಮಾಡಿಕೊಡಲಾಗುತ್ತಿದೆ. ಈ ಮೂಲಕ ಪ್ರಧಾನಿ ಉತ್ತಮ ವ್ಯಾಪಾರಿ ಎಂಬುದನ್ನು ಸಾಭೀತು ಮಾಡುತ್ತಿದ್ದಾರೆಯೇ ಹೊರತು ಜನಪರ ಆಡಳಿತಗಾರ ಎಂಬುದು ಸುಳ್ಳಾಗಿದೆ ಎಂದು ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕೇಂದ್ರ, ರಾಜ್ಯ ಸರಕಾರಗಳ ಜನವಿರೋಧಿ ನೀತಿ ಖಂಡಿಸಿ ಎ.7ರಂದು ಗುರುವಾರ ನಗರದಲ್ಲಿ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಮೀಲ್ ಅಹ್ಮದ್, ರಮೇಶ್, ಪುಟ್ಟೇಗೌಡ ಮತ್ತಿತರರು ಉಪಸ್ಥಿತರಿದ್ದರು.







