ಉಡುಪಿ: ಇಂಧನ, ವಿದ್ಯುತ್ ಉಳಿತಾಯ ಮತ್ತು ಸುರಕ್ಷತೆ ಮಾಹಿತಿ ಕಾರ್ಯಾಗಾರ

ಉಡುಪಿ, ಎ.೬: ನಿರಂತರ ಬೆಲೆ ಏರಿಕೆ ಹೊರತಾಗಿಯೂ ಪ್ರಕೃತಿಯನ್ನು ಉಳಿಸಿಕೊಳ್ಳಲು ನೀರು, ವಿದ್ಯುತ್ ಹಾಗೂ ಗ್ಯಾಸ್‌ನಂತಹ ಪೆಟ್ರೋಲಿಯಂ ಇಂಧನಗಳನ್ನು ಹಿತಮಿತವಾಗಿ ಬಳಸಬೇಕು. ಬಳಕೆಯ ಕೆಲವು ಕ್ರಮಗಳನ್ನು ಸ್ವಲ್ಪವೇ ಬದಲಿಸಿಕೊಂಡರೆ ಬಹಳಷ್ಟು ಇಂಧನ ಉಳಿತಾಯ ಸಾಧ್ಯ ಎಂದು ಯುನಿಟಿ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ನ ರವೀಂದ್ರ ಗುಜ್ಜರಬೆಟ್ಟು ಹೇಳಿದ್ದಾರೆ.
ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ ಆಯೋಜಿಸಿದ್ದ ಇಂಧನ ಉಳಿತಾಯ ಮತ್ತು ವಿದ್ಯುತ್ ಸುರಕ್ಷೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕುಕ್ಕರ್ ಸೀಟಿ ಹೊಡೆಯಲಾರಂಭಿಸುವಾಗಲೇ ಗ್ಯಾಸ್ ನಂದಿಸುವುದು, ನಿಗದಿತ ನಿಯಮಿತ ವಾಹನ ಬಳಕೆಯಿಂದ ಗ್ಯಾಸ್, ಪೆಟ್ರೋಲಿಯಂ ಉಳಿತಾಯ ಮಾಡಬಹುದು. ಹಗಲು ಹೊತ್ತಿನಲ್ಲಿ ದೀಗಳನ್ನು ಅನಗತ್ಯವಾಗಿ ಉರಿಸದಿರುವುದು, ಎಲ್‌ಇಡಿ ಬಲ್ಬ್, ಟ್ಯೂಬ್‌ಲೈಟ್, ಬಿಎಲ್‌ಡಿಸಿ ಫ್ಯಾನ್ ನಂತಹ ಹೊಸ ಮಾದರಿ ವಿದ್ಯುತ್ ಉಪಕರಣಗಳ ಬಳಕೆಯಿಂದ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಉಳಿತಾಯ ಮಾಡಲು ಸಾಧ್ಯವಾಗುತ್ತದೆ ಎಂದು ರವೀಂದ್ರ ಗುಜ್ಜರಬೆಟ್ಟು ವಿವರಿಸಿದರು.
ವಿದ್ಯುತ್ ಬಳಸುವವರಿಗೆ ಬೇಕಿರುವ ಸಾಮಾನ್ಯ ಸಾಧನಗಳು, ಆಪತ್ಕಾಲದಲ್ಲಿ ತುರ್ತು ರಕ್ಷಣೆ ನೀಡುವ ಸರ್ಕ್ಯೂಟ್ ಬ್ರೇಕರ್, ಫ್ಯೂಸ್, ಅರ್ಥಿಂಗ್‌ಗಳ ಅಗತ್ಯತೆ ಹಾಗೂ ನಿರ್ವಹಣೆ, ವಿದ್ಯುತ್ ಲೆಕ್ಕಾಚಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಇಂದಿರಾ ಬಿ. ಸ್ವಾಗತಿಸಿ ದರು. ಶಿಕ್ಷಕರಾದ ರಾಮಚಂದ್ರ ಭಟ್, ನಾಗರತ್ನ ಭಾಗವತ್, ಮಂಜುಳಾ ಕೆ. ಉಪಸ್ಥಿತರಿದ್ದರು.







