ಕರ್ನಾಟಕವನ್ನು ಉತ್ತರ ಪ್ರದೇಶ ಮಾಡಲು ನಾವು ಬಿಡುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ

ಮೈಸೂರು: ಕೇಸರಿ ಬಟ್ಟೆ ಧರಿಸಿ ರಾಜ್ಯಕ್ಕೆ ಬೆಂಕಿ ಇಡುತ್ತಿರುವ ಸಂಘ ಪರಿವಾರವನ್ನು ಮುಖ್ಯಮಂತ್ರಿಗಳು ಹದ್ದು ಬಸ್ತಿನಲ್ಲಿಟ್ಟು ತಿಂಗಳೊಳಗೆ ರಾಜ್ಯದಲ್ಲಿ ಶಾಂತಿ ಕಾಪಾಡದಿದ್ದರೆ, ಜನರು ಸರ್ಕಾರವನ್ನೆ ಕಿತ್ತೊಗೆಯುತ್ತಾರೆ. ಕರ್ನಾಟವನ್ನು ಉತ್ತರ ಪ್ರದೇಶ ಮಾಡಲು ನಾವು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ನಗರದ ಕಲಾ ಮಂದಿರದಲ್ಲಿ ಬುಧವಾರ ಲೋಕನಾಯಕ ಜೆ.ಪಿ.ವಿಚಾರ ವೇದಿಕೆ ಆಯೋಜಿಸಿದ್ದ 'ಸರ್ವ ಜನಾಂಗದ ಶಾಂತಿಯ ತೋಟ ಒಂದು ಭಾವೈಕ್ಯತೆಯ ಚರ್ಚೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆ ಗಗನಕ್ಕೇರಿ ಬಡವರ ಬದುಕು ನರಕವಾಗುತ್ತಿದೆ. ರಾಜ್ಯದಲ್ಲಿ ಅಶಾಂತಿ, ಭಯದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರವನ್ನು ಪ್ರಶ್ನೆ ಮಾಡಬೇಕಿದ್ದ ಯುವಕರು ಕೇಸರಿ ಬಟ್ಟೆಯನ್ನು ಹಾಕಿಕೊಂಡು 'ಜೈ ಶ್ರೀರಾಮ್' ಎಂದು ಕೂಗುತ್ತಾ ಬೀದಿಯಲ್ಲಿ ಒಂದು ಸಮುದಾಯದ ವಿರುದ್ಧ ಅಘೋಷಿತ ಯುದ್ಧ ಸಾರಿ ರಾಷ್ಟ್ರದ ಮಾನ ಮರ್ಯಾದೆ ಹಾಳುಮಾಡುತಿದ್ದಾರೆ. ಕರ್ನಾಟಕವನ್ನು ಮತ್ತೊಂದು ಉತ್ತರ ಪ್ರದೇಶ ಮಾಡಲು ನಾವು ಬಿಡುವುದಿಲ್ಲ ಎಂದರು.
ರಾಜ್ಯದ ಗೃಹ ಸಚಿವರು ಬೆಂಗಳೂರಿನ ಗಲಾಟೆಗೆ ಕೋಮು ಬಣ್ಣ ಹಚ್ಚಿ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಅವರು ಹೇಳಿದರು.
ಸಮ್ಮಿಶ್ರ ಸರ್ಕಾರ ಪತನವಾದ ನಂತರ ನೆರೆ ಹಾವಳಿ, ಕೋವಿಡ್ ಕಾರಣದಿಂದ ಸರ್ಕಾರದ ವಿರುದ್ಧ ಮಾತನಾಡಲಿಲ್ಲ. ಆದರೆ, ಬಿಜೆಪಿ ಮತ್ತು ಸಂಘ ಪರಿವಾರ ಹಿಜಾಬ್, ಹಲಾಲ್, ವ್ಯಾಪಾರ ನಿಷೇಧ, ಮಸೀದಿ ಮೈಕ್ ವಿಚಾರ ಎತ್ತಿಕೊಂಡು ಧರ್ಮ, ಧರ್ಮಗಳ ನಡುವೆ ವಿಷ ಬಿತ್ತುತ್ತಿರುವುದನ್ನು ನೋಡಿ ಸುಮ್ಮನಿರಲು ಆಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ವಿಪಕ್ಷ ನಾಯಕರು ಈ ವಿಷಯ ಮಾತನಾಡಲು ಹೆದರುತ್ತಿದ್ದ ಕಾರಣ ನಾನು ಮಾತನಾಡಬೇಕಾಯ್ತು. ಈಗ ಬಿಜೆಪಿ ನನಗೆ ಸುಪಾರಿ ಕೊಟ್ಟಿದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ನನಗೆ ಆರೂವರೆ ಕೋಟಿ ಕನ್ನಡಿಗರು ಸುಪಾರಿ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಂ.ಇಬ್ರಾಹಿಂ, ಸಾಹಿತಿ ಡಾ.ಅರವಿಮದ ಮಾಲಗತ್ತಿ, ಇತಿಹಾಸ ತಜ್ಞ ಪ್ರೊ.ಬಿ.ವಿ.ನಂಜರಾಜೇ ಅರಸ್, ಪತ್ರಕರ್ತ ಬಿ.ಎಂ.ಹನೀಫ್, ಶ್ರೀ ಬಸವ ಧ್ಯಾನ ಮಂದಿರದ ಶ್ರೀ ಬಸವಲಿಂಗಮೂರ್ತಿ ಶರಣರು, ಮೌಲಾನ ಝಕಾವುಲ್ಲಾ ಸಿದ್ದಿಖಿ, ಪ್ರೊ.ಪಿ.ವಿ.ನಂಜರಾಜ ಅರಸ್, ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







