ಗೃಹ ಸಚಿವರ ಹೇಳಿಕೆ ಸಮಾಜದಲ್ಲಿ ಸಂಘರ್ಷ ಉಂಟು ಮಾಡುತ್ತದೆ: ಎಚ್.ಡಿ. ಕುಮಾರಸ್ವಾಮಿ ಆಕ್ರೋಶ

ಎಚ್.ಡಿ.ಕುಮಾರಸ್ವಾಮಿ
ಮೈಸೂರು: ಬೆಂಗಳೂರಿನಲ್ಲಿ ಕೊಲೆಯಾದ ಯುವಕ ಉರ್ದು ಮಾತನಾಡಲಿಲ್ಲ ಎಂದು ಚೂರಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ. ಈ ರೀತಿ ಗೃಹಸಚಿವರ ಬಾಯಿಂದ ಹೇಳಿಕೆ ಬಂದರೆ ಹಿಂದೂ ಮುಸ್ಲಿಂ ಸಮಾಜದ ನಡುವೆ ಸಂರ್ಘ ಉಂಟಾಗದೆ ಇರುತ್ತದೆಯೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಕೊಲೆಯನ್ನು ಪೊಲೀಸರು ಲಘುವಾಗಿ ಪರಿಗಣಿಸಬಾರದು, ಗೃಹ ಸಚಿವರು ಹಿಂದೂ ಯವಕ ಎನ್ನದೆ ದಲಿತ ಎನ್ನುತ್ತಾರೆ. ಜನತೆ ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಗೃಹ ಸಚಿವರು ಒಂದು ರೀತಿ ಹೇಳಿಕೆ, ಅಧಿಕಾರಿಗಳು ಒಂದು ರೀತಿ ಹೇಳಿಕೆ. ಯಾರೇ ಇರಲಿ ಸರ್ಕಾರ ಬಿಗಿ ಕೇಸ್ ಹಾಕಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನನ್ನ ಹೋರಾಟ ಯಾವುದೇ ಜಾತಿಯ ಧರ್ಮದ ಜನರ ಓಲೈಕೆಗಾಗಿ ಅಲ್ಲ, ನಾನು ರಾಜ್ಯದ ಶಾಂತಿಗಾಗಿ ಹೋರಾಟ ಮಾಡುತ್ತಿದ್ದೇನೆ ಹೊರತು ಯಾವುದೇ ಜಾತಿ ಧರ್ಮದ ಓಲೈಕೆ ಮಾಡಿ ಮತಗಳಿಸಲು ಅಲ್ಲ ಎಂದು ಸ್ಪಷ್ಟಪಡಿಸಿದರು.
ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿದಾಗ ಸಮಾಜದ ಸ್ವಾಸ್ಥ್ಯ ಯಾವ ರೀತಿ ಆಗಲಿದೆ ಎಂಬುದನ್ನು ಯೋಚಿಸಿ. ಗೃಹ ಸಚಿವರು ಎಲ್ಲಾ ಮಾಹಿತಿಯನ್ನು ಪಡೆದುಕೊಂಡು ಮಾತನಾಡಬೇಕು. ಇಂತಹ ಸಂಧರ್ಭದಲ್ಲಿ ಮುಖ್ಯಮಂತ್ರಿಗಳು ಮೌನ ವಹಿಸಿದ್ದಾರೆ. ಮುಖ್ಯಮಂತ್ರಿಗಳ ಮೌನ ರಾಜ್ಯದಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗಲಿದೆ. ಮೊದಲು ನಿಮ್ಮ ಮೌನ ಮುರಿಯಿರಿ ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ದೆಹಲಿಯಲ್ಲಿ ಒಂದು ಹೇಳಿಕೆ ನೀಡಿದ್ದಾರೆ. ನಾನು ಅವರಷ್ಟು ಬುದ್ಧಿವಂತನಲ್ಲ, ಅವರಷ್ಟು ಓದಿಲ್ಲ, ಆದರೆ ಸಾರ್ವಜನಿಕವಾಗಿ ಜನರ ಜೊತೆ ಹೇಗೆ ಬದುಕಬೇಕೆಂಬ ಬದುಕನ್ನು ತಿಳಿದುಕೊಂಡಿದ್ದೇನೆ. ಜನರ ಸಮಸ್ಯೆಗೆ ಯಾವ ರೀತಿ ಸ್ಪಂಧಿಸಬೇಕೆಂದು ತಿಳಿದುಕೊಂಡಿದ್ದೇನೆ. ಸರ್ಕಾರ ನಡೆಸುವವರು ಪ್ರಾರಂಬಿಕ ಹಂತದಲ್ಲಿ ಇಂತಹ ಸಮಸ್ಯೆಗಳನ್ನು ಚಿವುಟಿ ಹಾಕದಿದ್ದಲ್ಲಿ ಎಲ್ಲೋ ಒಂದು ಕಡೆ ದೊಡ್ಡ ಮಟ್ಟದ ಅನಾಹುತಗಳು ನಾಡಿಗೆ ಕಾದಿರಲಿದೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಹೇಳಿದರು.
ಇತ್ತೀಚಿನ ಸಿನಿಮಾಗಳೇ ಹುಡುಗರ ಈ ರೀತಿಯ ಕೃತ್ಯಗಳಿಗೆ ಪ್ರೇರಣೆಯಾಗುತ್ತಿದೆ. ನಿರ್ಮಾಪಕರಿಗೆ ನಾನು ಮನವಿ ಮಾಡುತ್ತೇನೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನು ಮಾಡುವ ಸಿನಿಮಾಗಳನ್ನು ತಯಾರು ಮಾಡಬೇಡಿ ಎಂದು ಹೇಳಿದರು.
ಇಂದು ರೇಷ್ಮೇ ಗೂಡಿಗೂ ಧರ್ಮ ಕಂಟಕ ಹಬ್ಬಿದೆ. ವಿಎಚ್ ಪಿ ಯವರು ರೀಲರ್ಸ್ ಆಗಲು ಸಾಧ್ಯಾನ? ಇಂತವರಿಂದಲೇ ಸಾವಿರ ರೂಪಾಯಿ ಇದ್ದ ರೇಷ್ಮೆಗೂಡಿನ ಬೆಲೆ ಇಂದು ಮುನ್ನೂರುಗೆ ಕುಸಿದಿದೆ. ಇವತ್ತು ರೇಷ್ಮೆ, ನಾಳೆ ಹುಣಸೇ ಹಣ್ಣಿಗೂ ಬರುತ್ತೆ. ಹುಣಸೆ ಸಪೋಟವನ್ನು ಮುಸ್ಲಿಮರು ಖರೀದಿಸುತ್ತಾರೆ. ನಾವು ಹಿಂದೂ ಅಂತ ನಾಮ ಹಾಕಿಕೊಂಡು ಬಂದರೆ ರೈತರ ಹೊಟ್ಟೆ ತುಂಬುತ್ತಾ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.







