ಒಂದೊಂದು ಹುದ್ದೆಗೂ ಕೋಟ್ಯಂತರ ಹಣ, ಎಲ್ಲರ ಬಂಡವಾಳ ಗೊತ್ತಿದೆ: ಭಾಸ್ಕರ್ ರಾವ್
"ಪೊಲೀಸ್ ಅಧಿಕಾರಿಯಾಗಿದ್ದರಿಂದ ಆಗ ಸರಕಾರದ ವಿರುದ್ಧ ಮಾತನಾಡಲು ಸಾಧ್ಯವಾಗಿರಲಿಲ್ಲ"

ಬೆಂಗಳೂರು, ಎ.6: ನನ್ನ ಸೇವಾ ಅವಧಿಯಲ್ಲಿ ರಾಜ್ಯದ ವಿದ್ಯಮಾನಗಳನ್ನ ಚೆನ್ನಾಗಿ ಅರಿತಿದ್ದೇನೆ. ಒಂದೊಂದು ಹುದ್ದೆಗೂ ಕೋಟ್ಯಂತರ ಹಣ ಕೊಡಬೇಕು. ಉತ್ತಮವಾಗಿ ಮಾತನಾಡುವ ನಾಯಕರ ಬಂಡವಾಳವನ್ನು ಮುಂದೆ ಬಿಚ್ಚಿಡುತ್ತೇನೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಗುಡುಗಿದ್ದಾರೆ.
ಇತ್ತೀಚೆಗಷ್ಟೇ ಆಮ್ ಆದ್ಮಿ ಪಾರ್ಟಿ ಸೇರಿರುವ ಅವರು ಮಾಧ್ಯಮಗಳ ಜೊತೆ ಸಂವಾದದಲ್ಲಿ ಪಾಲ್ಗೊಂಡು, ಪೊಲೀಸ್ ಅಧಿಕಾರಿಯಾಗಿದ್ದರಿಂದ ನಾನು ಆಗ ಸರಕಾರದ ವಿರುದ್ಧ ಮಾತನಾಡಲು ಸಾಧ್ಯವಾಗಿರಲಿಲ್ಲ. ವ್ಯವಸ್ಥೆಯಿಂದ ಬೇಸತ್ತು ನಿವೃತ್ತಿ ತೆಗೆದುಕೊಂಡಿದ್ದೇನೆ. ಇನ್ಮುಂದೆ ಎಲ್ಲರ ಬಂಡವಾಳ ಬಿಚ್ಚಿಡ್ತೀನಿ ಎಂದರು.
ಕೊರೋನ ಸಂದರ್ಭದಲ್ಲಿ ಜನರ ಕಷ್ಟವನ್ನ ಹತ್ತಿರದಿಂದ ನೋಡಿದೆ. ಕೋಟ್ಯಂತರ ಹಣ ಖರ್ಚು ಮಾಡುತ್ತಾರೆ. ಜನರ ಪರಿಸ್ಥಿತಿ ಬದಲಾವಣೆ ಆಗಲೇ ಇಲ್ಲ. ಎಲ್ಲವೂ ಕಾಗದದ ಮೇಲೆ ಸೀಮಿತವಾಗಿತ್ತು. ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೆ ನೈತಿಕತೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಂದೆ ನನ್ನ ಮನೆ ಮೇಲೆ ದಾಳಿಯಾಗಬಹುದು. ಏನೇ ಆದರೂ ಎದುರಿಸಲು ಸಿದ್ಧನಿದ್ದೇನೆ. ಇದುವರೆಗೂ ಒಂದು ಕಪ್ಪು ಚುಕ್ಕೆ ನನ್ನ ಮೇಲಿಲ್ಲ. ಕರ್ನಾಟಕದಲ್ಲಿ ಒಳ್ಳೆಯ ಅಧಿಕಾರಿಗಳಿಗೆ ಅವಕಾಶವೇ ಇಲ್ಲದಂತಾಗಿದೆ. ಎಷ್ಟೋ ಜನ ಕರ್ನಾಟಕ ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಒಳ್ಳೆಯ ಆಡಳಿತ ಕೊಡಬೇಕಾದ ಪಕ್ಷದ ಅಗತ್ಯ ಇದೆ. ಅದನ್ನು ಎಎಪಿ ಮಾಡುತ್ತಿದೆ ಎಂದರು.
ಆಮ್ ಆದ್ಮಿ ಪಾರ್ಟಿಗೂ ಬೇರೆ ಪಕ್ಷಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಬೇರೆ ಪಕ್ಷಗಳು ಹಾಗೂ ಅವುಗಳ ನಾಯಕರು ಹಣಬಲದಲ್ಲಿ ಮಾತ್ರ ಶ್ರೀಮಂತರಾಗಿದ್ದಾರೆ. ನೈತಿಕತೆಯಲ್ಲಿ ಅವರೆಲ್ಲ ಬಡವರು. ಆದರೆ ಆಮ್ ಆದ್ಮಿ ಪಾರ್ಟಿಯು ವಿಚಾರದಲ್ಲಿ ಶ್ರೀಮಂತವಾಗಿದೆ. ಪ್ರಾಮಾಣಿಕತೆ ಹಾಗೂ ಸ್ವಚ್ಛ ರಾಜಕೀಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಾತನಾಡುವ ನೈತಿಕತೆಯನ್ನು ಎಎಪಿ ಉಳಿಸಿಕೊಂಡಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.
ಹಿಜಾಬ್, ಹಲಾಲ್, ಆಝಾನ್ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿ, ನಾವೆಲ್ಲರೂ ಭಾರತೀಯರು. ಬೆಲೆ ಏರಿಕೆಯಿಂದ ಜನರು ಸಾಯುತ್ತಿದ್ದಾರೆ. ಅದಕ್ಕೆ ಉತ್ತರ ಕೊಡಲು ಆಗುತ್ತಿಲ್ಲ. ಅದೇ ಕಾರಣಕ್ಕೆ ವಿಷಯಾಂತರ ಮಾಡಲು ವಿವಾದಗಳು ಸೃಷ್ಟಿಯಾಗುತ್ತಿವೆ ಎಂದು ಆರೋಪಿಸಿದರು. ಚುನಾವಣೆ ಯಾವಾಗ ಬೇಕಾದರೂ ನಡೆಯಲಿ. ಅದಕ್ಕೆ ನಾವು ಸಿದ್ಧರಾಗಿದ್ದೇವೆ ಎನ್ನುವ ಮೂಲಕ ಮುಂದಿನ ವಿಧಾನಸಭಾ ಚುನಾವಣಾ ಅಖಾಡಕ್ಕೆ ಧುಮುಕುವ ಉತ್ಸುಕತೆ ತೋರಿದರು.
ಮಾಧ್ಯಮ ಸಂವಾದದಲ್ಲಿ ಎಎಪಿ ಅಧ್ಯಕ್ಷ ಪೃಥ್ವಿರೆಡ್ಡಿ, ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ, ರಾಜ್ಯ ಸಂಘಟನಾ ಪ್ರಮುಖ ಡಾ. ದಾಮೋದರನ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.







