ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಲು ಮನವಿ

ಮಂಗಳೂರು, ಎ.6: ಜಿಲ್ಲೆಯ ಹಲವು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದೆ ಶೂನ್ಯ ಶಾಲೆಗಳಾಗಿವೆ. ಹಲವು ಕಡೆಗಳಲ್ಲಿ ಶಾಲಾಡಳಿತವೇ ಶಿಕ್ಷರನ್ನು ನೇಮಿಸಿ ಅನುದಾನಿತ ಶಾಲೆಗಳನ್ನು ಖಾಸಗಿಯಾಗಿ ನಡೆಸುತ್ತಿದ್ದಾರೆ. ಸರಕಾರದ ಅನುದಾನ ಪಡೆಯುವ ಶಾಲೆಗಳಲ್ಲಿ ಶಿಕ್ಷರು ಇಲ್ಲದ ಕಾರಣ ಸಮಸ್ಯೆಯಾಗಿದೆ. ಹಾಗಾಗಿ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಬೇಕು ಎಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಮಿತಿಯು ಅಧ್ಯಕ್ಷ ಕೆ.ಎಂ.ಕೆ ಮಂಜನಾಡಿ ನೇತೃತ್ವದ ನಿಯೋಗವು ದ.ಕ.ಜಿಲ್ಲಾ ಡಿಡಿಪಿಯು ಅವರಿಗೆ ಮನವಿ ಸಲ್ಲಿಸಿದೆ.
ನಿಯೋಜನೆ ಮಾಡುವಾಗ ಆಯಾ ತಾಲೂಕಿನ ಒಳಗೆ ಮಾಡಿದರೆ ಶಿಕ್ಷಕರಿಗೆ ತೊಂದರೆಯಾಗದು. ಅಲ್ಲದೆ ಮಕ್ಕಳ ಸಂಖ್ಯೆ ಜಾಸ್ತಿ ಇರುವ ಶಾಲೆಗಳಿಗೂ ಶಿಕ್ಷಕರನ್ನು ನೇಮಿಸಬೇಕು. ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಿವೃತ್ತಿ ಹೊಂದುವ ವೇಳೆ ರಜೆ ನಗದೀಕರಣಕ್ಕೆ ಅನುದಾನ ಇಲ್ಲ ಎಂಬ ಕಾರಣ ನೀಡಬಾರದು ಎಂದು ಒತ್ತಾಯಿಸಿತು.
ನಿಯೋಗದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಎಚ್.ಮಲಾರ್, ಅಲ್ಪೋನ್ಸಾ ಜೋಸೆಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಲ್ಯಾನ್ಸಿ ರಾಡ್ರಿಗಸ್, ಸಂಘಟನಾ ಕಾರ್ಯದರ್ಶಿ ಅಂಬರೀಶ, ವನಿತಾ ಸುರೇಶ, ತಿಪ್ಪೋಜಿ, ಮಾಧ್ಯಮ ಕಾರ್ಯದರ್ಶಿ ಶಾರದಾ, ಲೆಕ್ಕಪರಿಶೋಧಕ ಎಡ್ವರ್ಡ್ ಐಮನ್ ಉಪಸ್ಥಿತರಿದ್ದರು.