ದೇಶ ಕಂಡ ತೀವ್ರ ಆರ್ಥಿಕ ಬಿಕ್ಕಟ್ಟು ಹಸಿವಿನ ಸಮಸ್ಯೆಗೆ ಕಾರಣವಾಗಲಿದೆ: ಶ್ರೀಲಂಕಾ ಸಂಸತ್ ನ ಸ್ಪೀಕರ್ ಎಚ್ಚರಿಕೆ
"ಮುಂದಿನ ದಿನಗಳಲ್ಲಿ ಆಹಾರ, ಗ್ಯಾಸ್, ವಿದ್ಯುತ್ ನ ತೀವ್ರ ಅಭಾವ ಕಾಡಲಿದೆ"

photo courtesy:twitter
ಕೊಲಂಬೊ, ಎ.6: ಶ್ರೀಲಂಕಾದಲ್ಲಿ ಪತನದ ಅಂಚಿಗೆ ಸಾಗುತ್ತಿರುವ ಅರ್ಥವ್ಯವಸ್ಥೆಯ ಬಿಕ್ಕಟ್ಟು 22 ಮಿಲಿಯನ್ ಜನಸಂಖ್ಯೆಯ ದ್ವೀಪರಾಷ್ಟ್ರದಲ್ಲಿ ಹಸಿವಿನ ಸಮಸ್ಯೆಗೆ ಕಾರಣವಾಗಲಿದೆ ಎಂದು ಸಂಸತ್ತಿನ ಸ್ಪೀಕರ್ ಮಹೇಂದ್ರ ಅಭಯ್ ವರ್ಧನ ಎಚ್ಚರಿಸಿದ್ದಾರೆ.
ದೇಶಕ್ಕೆ ಎದುರಾದ ಅತ್ಯಂತ ಗಂಭೀರ ಬಿಕ್ಕಟ್ಟು ಇದು ಎಂದು ಹೇಳಲಾಗುತ್ತಿದೆ. ಆದರೆ ಇದು ಬಿಕ್ಕಟ್ಟಿನ ಆರಂಭ ಮಾತ್ರ ಎಂದು ನಾನು ಭಾವಿಸುತ್ತಿದ್ದೇನೆ. ಆಹಾರ ಪದಾರ್ಥಗಳು, ಗ್ಯಾಸ್, ವಿದ್ಯುತ್ಶಕ್ತಿ ಕೊರತೆ ಮುಂದಿನ ದಿನದಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ. ಆಹಾರ ವಸ್ತುಗಳ ಕೊರತೆ ಸಮಸ್ಯೆ ಇನ್ನಷ್ಟು ಹೆಚ್ಚಾಗಿ ಜನರು ಉಪವಾಸ ಬೀಳುವ ಪರಿಸ್ಥಿತಿ ಬರಬಹುದು ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.
ದೇಶಕ್ಕೆ ಎದುರಾಗಿರುವ ಅಸಾಮಾನ್ಯ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಸಂಸತ್ತಿನಲ್ಲಿ ಆರಂಭವಾದ ಅಧಿವೇಶನದ ಆರಂಭದಲ್ಲಿ ಅವರು ಮಾತನಾಡುತ್ತಿದ್ದರು. ಆಹಾರ, ತೈಲದ ತೀವ್ರ ಕೊರತೆಯ ಜತೆಗೆ ದಾಖಲೆ ಮಟ್ಟ ತಲುಪಿರುವ ಹಣದುಬ್ಬರದ ಕಾರಣ ಶ್ರೀಲಂಕಾದ ಅರ್ಥವ್ಯವಸ್ಥೆ, 1948ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕದ ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದಿದೆ. ಪ್ರವಾಸೋದ್ದಿಮೆ ಪ್ರಮುಖ ಆದಾಯ ಮೂಲವಾಗಿರುವ ಶ್ರೀಲಂಕಾದಲ್ಲಿ ಕೊರೋನ ಸಾಂಕ್ರಾಮಿಕದ ಕಾರಣ ಆದಾಯ ಮೂಲಕ್ಕೇ ಕೊಡಲಿಯೇಟು ಬಿದ್ದಿದ್ದು ಅಗತ್ಯ ವಸ್ತುಗಳ ಆಮದಿಗೆ ವಿದೇಶಿ ವಿನಿಮಯದ ಕೊರತೆಯಿದೆ. ಶ್ರೀಲಂಕಾ 51 ಬಿಲಿಯನ್ ಡಾಲರ್ನಷ್ಟು ವಿದೇಶಿ ಸಾಲ ಪಾವತಿಸಲು ಬಾಕಿಯಿದ್ದು ಸಾಲ ಪಾವತಿಸಲು ವಿಫಲವಾದರೆ ಶ್ರೀಲಂಕಾಕ್ಕೆ ಮುಂದಿನ ದಿನದಲ್ಲಿ ಅಂತರಾಷ್ಟ್ರೀಯ ಸಾಲ ಲಭಿಸಲು ಸಮಸ್ಯೆಯಾಗಲಿದೆ ಎಂದು ರೇಟಿಂಗ್ ಏಜೆನ್ಸಿಗಳು ಸರಕಾರವನ್ನು ಎಚ್ಚರಿಸಿವೆ.
ಈ ಮಧ್ಯೆ, ಸರಕಾರ ಮತ್ತು ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ದೇಶವ್ಯಾಪಿ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆ ಅಶ್ರುವಾಯು, ಜಲಫಿರಂಗಿ ಮತ್ತು ರಬ್ಬರ್ ಬುಲೆಟ್ ಪ್ರಯೋಗಿಸಿದೆ ಎಂದು ಮಾಧ್ಯಮ ವರದಿಮಾಡಿದೆ. ಆದರೆ ಕಳೆದ ವಾರ ದೇಶದಾದ್ಯಂತ ಜಾರಿಗೊಳಿಸಿದ್ದ ತುರ್ತು ಪರಿಸ್ಥಿತಿಯನ್ನು ಮಂಗಳವಾರ ಮಧ್ಯರಾತ್ರಿ ರದ್ದುಪಡಿಸಲಾಗಿದೆ. ತಮಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂದು ಪ್ರತಿಭಟನೆಗೆ ಸಂಬಂಧಿಸಿ ಬಂಧಿಸಲ್ಪಟ್ಟ 60ಕ್ಕೂ ಅಧಿಕ ಜನರು ಹೇಳಿದ್ದಾರೆ. ಸರಕಾರ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದ್ದರೂ, ಒಂದು ವಾರ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ವಿಪಕ್ಷಗಳು ಅಧ್ಯಕ್ಷ ರಾಜಪಕ್ಸ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.







