ವಿಜಯಪುರದಲ್ಲಿ ದಸಂಸ ವತಿಯಿಂದ ಎ.8ರಿಂದ ರಾಜ್ಯ ಮಟ್ಟದ ಅಧ್ಯಯನ ಶಿಬಿರ
ಬೆಂಗಳೂರು, ಎ. 6: ‘ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ಎ.8ರಿಂದ ಮೂರು ದಿನಗಳ ಕಾಲ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂ ಕೆಬಿಜಿಎನ್‍ಎಲ್ ಸಮುದಾಯ ಭವನದಲ್ಲಿ ಪದಾಧಿಕಾರಿಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿದೆ.
ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದರಾವ್, ಸಾಹಿತಿ ಡಾ.ಸಿದ್ಧಲಿಂಗಯ್ಯ ಹಾಗೂ ಸುರೇಶ್ ಮಣ್ಣೂರ ನೆನಪಿನಲ್ಲಿ ಶಿಬಿರ ನಡೆಯಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ವಹಿಸಲಿದ್ದು, ಮುಖ್ಯ ಅತಿಥಿಗಳಾದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಶಿವಾನಂದ ಪಾಟೀಲ್, ಯಶವಂತರಾಯಗೌಡ ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
‘ಅಂಬೇಡ್ಕರ್ ಲೋಹಿಯಾ ಚಿಂತನೆಗಳ ಮೂಲಕ ಜಾತಿ ವಿನಾಶ, ಮಹಿಳೆಯರು ಮತ್ತು ಜಾತಿ ನ್ಯಾಯ-ಲಿಂಗ ನ್ಯಾಯ, ಧರ್ಮಾಂತರ ಏಕೆ? ಮತಾಂತರ ನಿಷೇಧ ಕಾನೂನು ಹಿಂದಿರುವ ಹುನ್ನಾರ, ಹೊಸ ಶಿಕ್ಷಣ ನೀತಿ ಮೂಲಕ ಬ್ರಾಹ್ಮಣವಾದ ಮತ್ತು ಉನ್ನತ ಶಿಕ್ಷಣದಲ್ಲಿ ದಲಿತರ ಸ್ಥಿತಿಗತಿಗಳು, ಮೂಲ ನಿವಾಸಿಗಳೇ ನೀವೆಷ್ಟು ಬಲ್ಲಿರಿ ನಿಮ್ಮ ಇತಿಹಾಸ? ದಲಿತ ಚಳವಳಿಯ ಮುಂದಿನ ಸವಾಲುಗಳ ಹಾಗೂ ಬಲಪಡಿಸುವ ಬಗ್ಗೆ ಹಾಗೂ ದಲಿತ ಸಮುದಾಯದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳು' ವಿಷಯದ ಕುರಿತು ಹಲವು ಗಣ್ಯರು ಮಾತನಾಡಲಿದ್ದಾರೆ ಎಂದು ಬೆಂಗಳೂರು ವಿಭಾಗಿಯ ಸಂಚಾಲಕ ಜೀವನಹಳ್ಳಿ ಆರ್.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







