ಉ.ಪ್ರ.ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಶಾಲಾ ಪ್ರಾಂಶುಪಾಲರ ಬಂಧನ, ಬಂಧಿತರ ಸಂಖ್ಯೆ 51ಕ್ಕೇರಿಕೆ

PHOTO COURTESY:TWITTER
ಬಲಿಯಾ,ಎ.6: ಉತ್ತರ ಪ್ರದೇಶದ ಬಲಿಯಾದಲ್ಲಿ ಕಳೆದ ವಾರ 12ನೇ ತರಗತಿಯ ಇಂಗ್ಲೀಷ್ ಪ್ರಶ್ನೆಪತ್ರಿಕೆಯ ಸೋರಿಕೆಗೆ ಸಂಬಂಧಿಸಿದಂತೆ ಖಾಸಗಿ ಶಾಲೆಯೊಂದರ ಪ್ರಾಂಶುಪಾಲ ಅಕ್ಷಯಲಾಲ್ ಯಾದವ್ ಎನ್ನುವವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಒಟ್ಟು ಸಂಖ್ಯೆ 51ಕ್ಕೇರಿದೆ.
ಜಿಲ್ಲಾ ಹೆಚ್ಚುವರಿ ಶಾಲೆಗಳ ನಿರೀಕ್ಷಕ ರಾಕೇಶ್ ಕುಮಾರ್ ಸಿಂಗ್ ಅವರ ದೂರಿನ ಮೇರೆಗೆ ರವಿವಾರ ಉಭಾಂವ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು ಎಂದು ಡಿಎಸ್ಪಿ ಶಿವನಾರಾಯಣ ವೈಶ್ಯ ತಿಳಿಸಿದರು.
ಈ ಮೊದಲು ಬಂಧಿಸಲ್ಪಟ್ಟವರಲ್ಲಿ ಬಲಿಯಾ ಜಿಲ್ಲಾ ಶಾಲೆಗಳ ನಿರೀಕ್ಷಕ ಬೃಜೇಶಕುಮಾರ ಮಿಶ್ರಾ,ಖಾಸಗಿ ಪದವಿಪೂರ್ವ ಕಾಲೇಜುಗಳ ಮ್ಯಾನೇಜರ್ಗಳು ಮತ್ತು ಪ್ರಾಂಶುಪಾಲರು ಹಾಗೂ ಮೂವರು ಪತ್ರಕರ್ತರು ಸೇರಿದ್ದಾರೆ.ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಬಲಿಯಾ ಸೇರಿದಂತೆ 24 ಜಿಲ್ಲೆಗಳಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು,ಈಗ ಎಪ್ರಿಲ್ 13ರಂದು ಪರೀಕ್ಷೆ ನಡೆಯಲಿದೆ.ಬಲಿಯಾದ ಖಾಸಗಿ ಪದವಿಪೂರ್ವ ಕಾಲೇಜಿನ ಮ್ಯಾನೇಜರ್ ಪ್ರಶ್ನೆಪತ್ರಿಕೆಯನ್ನು ಸೋರಿಕೆಗೊಳಿಸಿದ್ದ ಮತ್ತು ಉತ್ತರಗಳ ಸಹಿತ ಪ್ರತಿಗಳನ್ನು ತಲಾ 25,000 ರೂ.ಗಳಿಂದ 30,000 ರೂ.ವರೆಗೆ ಮಾರಾಟ ಮಾಡಿದ್ದ. ಉತ್ತರ ಸಹಿತ ಪ್ರಶ್ನೆಪತ್ರಿಕೆಯನ್ನು ವಾಟ್ಸ್ ಆ್ಯಪ್ನಲ್ಲಿಯೂ ಶೇರ್ ಮಾಡಿಕೊಳ್ಳಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯದ ವಿಶೇಷ ಕಾರ್ಯಪಡೆಗೆ ಆದೇಶಿಸಿದ್ದಾರೆ.







