ಐಪಿಎಲ್: ಮುಂಬೈಯನ್ನು ಕೆಡವಿದ ಕೆಕೆಆರ್
ವೆಂಕಟೇಶ್ ಅಯ್ಯರ್, ಕಮಿನ್ಸ್ ಅರ್ಧಶತಕ

ಪುಣೆ, ಎ.6: ಆಲ್‌ರೌಂಡರ್‌ಗಳಾದ ವೆಂಕಟೇಶ ಅಯ್ಯರ್ ಹಾಗೂ ಪ್ಯಾಟ್ ಕಮಿನ್ಸ್ ಅವರ ಅಮೋಘ ಆಟದ ನೆರವಿನಿಂದ ಐಪಿಎಲ್ ಟ್ವೆಂಟಿ-20 ಟೂರ್ನಿಯ 14ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿತು.
ಎಂಸಿಎ ಸ್ಟೇಡಿಯಂನಲ್ಲಿ ಬುಧವಾರ ಗೆಲ್ಲಲು 162 ರನ್ ಗುರಿ ಪಡೆದ ಕೆಕೆಆರ್ 16 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕಮಿನ್ಸ್(ಔಟಾಗದೆ 56 ರನ್, 15 ಎಸೆತ, 4 ಬೌಂಡರಿ, 6 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಕೆಕೆಆರ್‌ನತ್ತ ತಿರುಗಿಸಿದರು. ಕಮಿನ್ಸ್‌ಗೆ ವೆಂಕಟೇಶ್ ಅಯ್ಯರ್(ಔಟಾಗದೆ 50 ರನ್, 41 ಎಸೆತ, 6 ಬೌಂಡರಿ, 1 ಸಿಕ್ಸರ್)ಸಾಥ್ ನೀಡಿದರು. ಈ ಜೋಡಿ ಆರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 61 ರನ್ ಸೇರಿಸಿ ಇನ್ನೂ 4 ಓವರ್‌ಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಕೆಕೆಆರ್ ತಂಡ ಮುಂಬೈ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಕಳಪೆ ಆರಂಭದಿಂದ ಚೇತರಿಸಿಕೊಂಡ ಮುಂಬೈ, ಸೂರ್ಯಕುಮಾರ್ ಯಾದವ್(52 ರನ್, 36 ಎಸೆತ, 5 ಬೌಂಡರಿ, 2 ಸಿಕ್ಸರ್)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.
2.5ನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ(3 ರನ್)ವಿಕೆಟನ್ನು ಕಳೆದುಕೊಂಡ ಮುಂಬೈ ತಂಡ ಕಳಪೆ ಆರಂಭ ಪಡೆಯಿತು. 2ನೇ ವಿಕೆಟ್‌ಗೆ 39 ರನ್ ಜೊತೆಯಾಟ ನಡೆಸಿದ ಇಶಾನ್ ಕಿಶನ್(14 ರನ್, 21 ಎಸೆತ) ಹಾಗೂ ಡೆವಾಲ್ಡ್ ಬ್ರೆವಿಸ್(29 ರನ್,19 ಎಸೆತ, 2 ಬೌಂಡರಿ, 2 ಸಿಕ್ಸರ್) ತಂಡವನ್ನು ಆಧರಿಸಿದರು.
4ನೇ ವಿಕೆಟ್‌ಗೆ 83 ರನ್ ಜೊತೆಯಾಟ ನಡೆಸಿರುವ ಸೂರ್ಯಕುಮಾರ್ (52 ರನ್) ಹಾಗೂ ತಿಲಕ್ ವರ್ಮಾ(ಔಟಾಗದೆ 38 ರನ್, 27 ಎಸೆತ, 3 ಬೌಂಡರಿ, 2 ಸಿಕ್ಸರ್) ತಂಡ ಉತ್ತಮ ಮೊತ್ತ ಗಳಿಸಲು ಕಾರಣರಾದರು. ಯಾದವ್ ಔಟಾದ ಬಳಿಕ ಕಿರೊನ್ ಪೊಲಾರ್ಡ್(ಔಟಾಗದೆ 22, 5 ಎಸೆತ, 3 ಸಿಕ್ಸರ್)ಜೊತೆ 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 23 ರನ್ ಸೇರಿಸಿದ ತಿಲಕ್ ವರ್ಮಾ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಕೆಕೆಆರ್ ಪರ ಪ್ಯಾಟ್ ಕಮಿನ್ಸ್(2-49)ಎರಡು ವಿಕೆಟ್ ಪಡೆದರು.







