ಆಕಸ್ಮಿಕ ಕ್ಷಿಪಣಿ ಉಡಾವಣೆ ಪ್ರಕರಣದ ಬಳಿಕ ಭಾರತದ ಸ್ಪಷ್ಟನೆ ಕೇಳಿದ್ದ ಫಿಲಿಪ್ಪೀನ್ಸ್

PHOTO COURTESY:TWITTER
ಹೊಸದಿಲ್ಲಿ, ಎ.6: ಭಾರತದಿಂದ ಪಾಕಿಸ್ತಾನದತ್ತ ಆಕಸ್ಮಿಕ ಕ್ಷಿಪಣಿ ಉಡಾವಣೆ ಪ್ರಕರಣದ ಬಳಿಕ, ಭಾರತದಿಂದ ಖರೀದಿಸಲಿರುವ ಬ್ರಹ್ಮೋಸ್ ಕ್ಷಿಪಣಿಯ ಬಗ್ಗೆ ಫಿಲಿಪ್ಪೀನ್ಸ್ ಸ್ಪಷ್ಟೀಕರಣ ಕೇಳಿದೆ ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ. ಭಾರತ-ಫಿಲಿಪ್ಪೀನ್ಸ್ ಸಂಬಂಧದ ವಿಷಯದಲ್ಲಿ ಮಂಗಳವಾರ ಆಯೋಜಿಸಿದ ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಫಿಲಿಪ್ಪೀನ್ಸ್ಗೆ ಭಾರತದ ರಾಯಭಾರಿ ಶಂಭು ಎಸ್.ಕುಮಾರನ್, ಕ್ಷಿಪಣಿ ಉಡಾವಣೆ ಆಕಸ್ಮಿಕ ಘಟನೆ ಎಂದು ಭಾರತದ ರಕ್ಷಣಾ ಇಲಾಖೆ ಹೇಳಿಕೆ ನೀಡಿದ ಬಳಿಕ ಈ ವಿಷಯದಲ್ಲಿ ಫಿಲಿಪ್ಪೀನ್ಸ್ ಸರಕಾರ ಆತಂಕ ಹೊಂದಿತ್ತೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ‘ಹೌದು. ಈ ಬಗ್ಗೆ ಫಿಲಿಪ್ಪೀನ್ಸ್ ರಕ್ಷಣಾ ಕಾರ್ಯದರ್ಶಿ ಜತೆ ಮಾತನಾಡಿದ್ದೇನೆ ಎಂದರು. ರಕ್ಷಣಾ ಕಾರ್ಯದರ್ಶಿ ಡೆಲ್ಫಿನ್ ಲೊರೆಂಝಾನಾರನ್ನು ಭೇಟಿ ಮಾಡಿ, ನಮ್ಮ ರಕ್ಷಣಾ ಇಲಾಖೆ ನೀಡಿದ ಸ್ಪಷ್ಟನೆಯನ್ನು ಅವರಿಗೆ ತಿಳಿಸಿದ್ದೆ. ಇದನ್ನು ಆತಂಕ ಎಂದು ಕರೆಯಲಾಗದು. ಅವರು ಕೇಳಿದ ಪ್ರಶ್ನೆಗೆ ನಾವು ವಾಸ್ತವದೊಂದಿಗೆ ಪ್ರತಿಕ್ರಿಯಿಸಿದ್ದೇವೆ.
ಯಾವುದೇ ತಾಂತ್ರಿಕ ಸಮಸ್ಯೆಯಿಲ್ಲ ಎಂಬುದು ನಮ್ಮ ಉತ್ತರವಾಗಿತ್ತು. ಪ್ರಕರಣದ ಬಗ್ಗೆ ತಾಂತ್ರಿಕ ವಿಚಾರಣೆ ನಡೆಯುತ್ತಿದ್ದು ಮಾಹಿತಿ ಲಭಿಸಿದೊಡನೆ ಈ ಕುರಿತ ಗೊಂದಲವನ್ನು ತಿಳಿಗೊಳಿಸಲಾಗುವುದು ಎಂದು ಕುಮಾರನ್ ಹೇಳಿದ್ದಾರೆ. ಭಾರತದಿಂದ ಬ್ರಹ್ಮೋಸ್ ಕ್ಷಿಪಣಿ ಖರೀದಿಸುವ 375 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಫಿಲಿಪ್ಪೀನ್ಸ್ ಸಹಿ ಹಾಕಿದೆ. ಫಿಲಿಪ್ಪೀನ್ಸ್ ಬ್ರಹ್ಮೋಸ್ ಕ್ಷಿಪಣಿ ಖರೀದಿಸುವ ಮೊತ್ತಮೊದಲ ದೇಶವಾಗಿದೆ. ಭಾರತದ ಕ್ಷಿಪಣಿಯೊಂದು ಆಕಸ್ಮಿಕವಾಗಿ ಉಡಾವಣೆಯಾಗಿ ಪಾಕಿಸ್ತಾನದ ಭೂಪ್ರದೇಶದಲ್ಲಿ ಬಿದ್ದಿದೆ ಎಂದು ರಕ್ಷಣಾ ಇಲಾಖೆ ಮಾರ್ಚ್ 11ರಂದು ಘೋಷಿಸಿತ್ತು. ಇದು ಬ್ರಹ್ಮೋಸ್ ಕ್ಷಿಪಣಿಯಾಗಿರಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಅಲ್ಲದೆ, ಬ್ರಹ್ಮೋಸ್ ಕ್ಷಿಪಣಿ ರಶ್ಯ- ಭಾರತದ ಜಂಟಿ ಉತ್ಪಾದನೆಯಾಗಿರುವುದರಿಂದ ಉಕ್ರೇನ್ನಲ್ಲಿನ ಬೆಳವಣಿಗೆ ಕ್ಷಿಪಣಿ ಖರೀದಿ ಒಪ್ಪಂದದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರನ್, ಪ್ರಪ್ರಥವಾಗಿ ಇದು ಭಾರತ-ಫಿಲಿಪ್ಪೀನ್ಸ್ ನಡುವಿನ ಒಪ್ಪಂದ. ಕ್ಷಿಪಣಿ ವ್ಯವಸ್ಥೆಯನ್ನು ರಶ್ಯದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ್ದರೂ ವ್ಯವಹಾರ ಒಪ್ಪಂದ ಭಾರತ ಮತ್ತು ಫಿಲಿಪ್ಪೀನ್ಸ್ ನಡುವಿನದ್ದು. ಈ ದ್ವಿಪಕ್ಷೀಯ ಸಂಬಂಧ ಮುಂದುವರಿಯಲಿದೆ. ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ ಬಳಕೆ ಮಾಡುತ್ತಿದ್ದು ಅದರ ಸಾಮರ್ಥ್ಯವನ್ನು ದೃಢಪಡಿಸಿಕೊಂಡ ಬಳಿಕ ಫಿಲಿಪ್ಪೀನ್ಸ್ ಖರೀದಿಗೆ ಮುಂದಾಗಿದೆ ಎಂದು ಕುಮಾರನ್ ಸ್ಪಷ್ಟಪಡಿಸಿದರು.







