ಕೋಮುವಾದಿ ಗೂಂಡಾಗಳನ್ನು ಬಂಧಿಸಿ,ಜೈಲಿನಲ್ಲಿರುವ ಪತ್ರಕರ್ತರನ್ನು ಬಿಡುಗಡೆಗೊಳಿಸಿ: ಪ್ರೆಸ್ ಕ್ಲಬ್ ಆಫ್ ಇಂಡಿಯಾ

PHOTO COURTESY:TWITTER/@SimraAnsari_
ಹೊಸದಿಲ್ಲಿ,ಎ.6: ಇತ್ತೀಚಿಗೆ ದಿಲ್ಲಿಯ ಬುರಾರಿ ಮೈದಾನದಲ್ಲಿ ಐವರು ಪತ್ರಕರ್ತರ ಮೇಲಿನ ಹಲ್ಲೆ ಮತ್ತು ಕಳೆದ ವಾರ ಉತ್ತರ ಪ್ರದೇಶದ ಬಲಿಯಾದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವರದಿ ಮಾಡಿದ್ದಕ್ಕಾಗಿ ಮೂವರು ಪತ್ರಕರ್ತರ ಬಂಧನವನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಖಂಡಿಸಿದೆ.
ಎ.3ರಂದು ಬುರಾರಿಯಲ್ಲಿ ನಡೆದಿದ್ದ ಹಿಂದು ಮಹಾಪಂಚಾಯತ್ ಅನ್ನು ವರದಿ ಮಾಡುತ್ತಿದ್ದ ನಾಲ್ವರು ಮುಸ್ಲಿಮರು ಸೇರಿದಂತೆ ಐವರು ಪತ್ರಕರ್ತರ ಮೇಲೆ ಬಲಪಂಥೀಯ ಗುಂಪೊಂದು ಹಲ್ಲೆ ನಡೆಸಿತ್ತು.
ವಿವಾದಾತ್ಮಕ ಹಿಂದು ಧಾರ್ಮಿಕ ನಾಯಕ ಯತಿ ನರಸಿಂಹಾನಂದರ ಅನುಯಾಯಿ ಪ್ರೀತ್ ಸಿಂಗ್ ನಡೆಸುತ್ತಿರುವ ಸೇವ್ ಇಂಡಿಯಾ ಪ್ರತಿಷ್ಠಾನದ ಆಶ್ರಯದಲ್ಲಿ ಹಿಂದು ಮಹಾಪಂಚಾಯತ್ ನಡೆಸಲಾಗಿತ್ತು. ಹಿಂದು ರಕ್ಷಾ ದಳದ ನಾಯಕ ಪಿಂಕಿ ಚೌಧರಿ ಸಂಘಟಕರಲ್ಲಿ ಓರ್ವನಾಗಿದ್ದ. ನೂರಾರು ಜನರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಲಾಗಿತ್ತು.
ಪತ್ರಕರ್ತರ ದೂರನ್ನು ದಾಖಲಿಸಿಕೊಳ್ಳಲು ಪೊಲೀಸರು ಮೊದಲು ನಿರಾಕರಿಸಿದ್ದರೂ ಬಳಿಕ ನರಸಿಂಹಾನಂದ ಮತ್ತು ಇತರರ ವಿರುದ್ಧ ಮೂರು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.
ಐವರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದು ಅತ್ಯಂತ ವಿಷಾದನೀಯ ಎಂದಿರುವ ಪಿಸಿಐ,ಇದು ಪತ್ರಕರ್ತರನ್ನು ಬಲವಂತದಿಂದ ತಮ್ಮ ದಾರಿಗೆ ತರಲು ಕೋಮುವಾದಿ ಗೂಂಡಾಗಳ ಪೂರ್ವಕಲ್ಪಿತ ದುಷ್ಟ ತಂತ್ರಗಳಾಗಿವೆ ಎಂದು ಆರೋಪಿಸಿದೆ.
ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳನ್ನು ನೋಡಿದರೆ ಈ ಜನರು ಮಾಧ್ಯಮಗಳನ್ನು ಸಂಪೂರ್ಣವಾಗಿ ದಮನಿಸಲು ಪಣ ತೊಟ್ಟಿದಾರೆನ್ನಬಹುದು ಎಂದು ಹೇಳಿರುವ ಪಿಸಿಐ,ಕೋಮುವಾದಿ ಗೂಂಡಾಗಳನ್ನು ತಕ್ಷಣ ಬಂಧಿಸದ್ದಕ್ಕಾಗಿ ದಿಲ್ಲಿ ಪೊಲೀಸರನ್ನು ತರಾಟೆಗೆತ್ತಿಕೊಂಡಿದೆ.
ಉತ್ತರ ಪ್ರದೇಶದಲ್ಲಿ 12ನೇ ತರಗತಿಯ ಇಂಗ್ಲೀಷ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ವರದಿ ಮಾಡಿದ್ದಕ್ಕಾಗಿ ಮೂವರು ಪತ್ರಕರ್ತರನ್ನು ಬಂಧಿಸಿರುವುದನ್ನೂ ಪಿಸಿಐ ಖಂಡಿಸಿದೆ.
ಸೋರಿಕೆಯಾಗಿದ್ದ ಪ್ರಶ್ನೆಪತ್ರಿಕೆಯ ಪ್ರತಿಗಳು ಮಾ.30ರಂದು ಆನ್ಲೈನ್ನಲ್ಲಿ ಹರಿದಾಡಿದ್ದವು ಮತ್ತು ಮರುದಿನ ಅಮರ ಉಜಾಲಾದ ಇಬ್ಬರು ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದರು. ಬಂಧನದ ಸಮಯದಲ್ಲಿ ಪೊಲೀಸರು ತನ್ನ ಕಚೇರಿಯಲ್ಲಿ ದಾಂಧಲೆಗೈದು,ತನ್ನ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದರು ಎಂದು ಬಂಧಿತರಲ್ಲೋರ್ವರಾದ ಅಜಿತಕುಮಾರ ಓಝಾ ಆರೋಪಿಸಿದ್ದಾರೆ. ಬಳಿಕ ಇನ್ನೋರ್ವ ಪತ್ರಕರ್ತನನ್ನೂ ಪೊಲೀಸರು ಬಂಧಿಸಿದ್ದು,ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಟ್ಟು 44ಕ್ಕೇರಿದೆ.
ಉ.ಪ್ರದೇಶ ಸರಕಾರವು ತನ್ನ ಇಚ್ಛೆಗೆ ಮಣಿಯದ ಪತ್ರಕರ್ತರನ್ನು ಬೆದರಿಸುವುದು ಮಾತ್ರವಲ್ಲ,ಅವರ ಬಂಧನವನ್ನೂ ಮಾಡುತ್ತಿದೆ ಎಂದು ಹೇಳಿರುವ ಪಿಸಿಐ,ಉ.ಪ್ರದೇಶದ ಪೊಲೀಸರು ಭಟ್ಟಂಗಿಗಳಾಗಿದ್ದಾರೆ ಮತ್ತು ಅಧಿಕಾರದಲ್ಲಿರುವವರನ್ನು ಮೆಚ್ಚಿಸಲು ಪತ್ರಕರ್ತರನ್ನು ಬಂಧಿಸಲು ಹೆಚ್ಚು ಉತ್ಸುಕರಾಗಿದ್ದಾರೆ ಎಂದು ಟೀಕಿಸಿದೆ.
ಪತ್ರಕರ್ತರನ್ನು ತಕ್ಷಣ ಬಿಡುಗಡೆಗೊಸುವಂತೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಮಾಫಿಯಾವನ್ನು ಹೊಣೆಯಾಗಿಸುವಂತೆ ಪಿಸಿಐ ಆಗ್ರಹಿಸಿದೆ.







