ಪಾಕ್ ರಾಜಕೀಯ ಬಿಕ್ಕಟ್ಟು ಅಭಿವೃದ್ಧಿ ಯೋಜನೆಗಳ ಮೇಲೆ ಪರಿಣಾಮ ಬೀರದು: ಚೀನಾ

photo courtesy:twitter
ಬೀಜಿಂಗ್: ಪಾಕಿಸ್ತಾನದೊಂದಿಗಿನ ಬಾಂಧವ್ಯ ಬಂಡೆಯಷ್ಟೇ ಗಟ್ಟಿಯಾಗಿದ್ದು ಎಂದಿಗೂ ಶಿಥಿಲವಾಗದು. ಆ ದೇಶದಲ್ಲಿನ ರಾಜಕೀಯ ಬಿಕ್ಕಟ್ಟು ಉಭಯ ದೇಶಗಳ ನಡುವಿನ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಚೀನಾ ಪ್ರತಿಪಾದಿಸಿದೆ. 60 ಬಿಲಿಯನ್ ಡಾಲರ್ ಮೊತ್ತದ ಸಿಪಿಇಸಿ(ಚೀನಾ ಪಾಕಿಸ್ತಾನ ಇಕನಾಮಿಕ್ ಕಾರಿಡಾರ್) ಸಹಿತ ಹಲವು ಜಂಟಿ ಯೋಜನೆಗಳಿಗೆ ಉಭಯ ದೇಶಗಳು ಸಹಿ ಹಾಕಿವೆ. ಇದೀಗ ಪಾಕಿಸ್ತಾನದಲ್ಲಿ ತಾರಕಕ್ಕೇರಿರುವ ರಾಜಕೀಯ ಬಿಕ್ಕಟ್ಟು ಚೀನಾಕ್ಕೆ ಆತಂಕ ಉಂಟು ಮಾಡಿದೆಯೇ ಎಂಬ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಝಾವೊ ಲಿಜಿಯನ್, ರಾಜಕೀಯ ಬಿಕ್ಕಟ್ಟು ಉಭಯ ದೇಶಗಳ ನಡುವಿನ ಅಭಿವೃದ್ಧಿ ಯೋಜನೆಯ ಮೇಲೆ ಪರಿಣಾಮ ಬೀರದು. ಆದರೆ ಪಾಕಿಸ್ತಾನದ ಹಿತದೃಷ್ಟಿ ಮತ್ತು ಅಭಿವೃದ್ಧಿಗಾಗಿ ಅಲ್ಲಿನ ಎಲ್ಲಾ ರಾಜಕೀಯ ಪಕ್ಷಗಳೂ ಭಿನ್ನಮತ ಮರೆದು ಬಿಕ್ಕಟ್ಟಿಗೆ ಪರಿಹಾರ ರೂಪಿಸಬೇಕಾಗಿದೆ ಎಂದರು.
ಇತರ ದೇಶಗಳ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸಬಾರದು ಎಂಬ ನೀತಿಯನ್ನು ಚೀನಾ ಯಾವತ್ತೂ ಪಾಲಿಸುತ್ತಿದೆ. ಚೀನಾ ಮತ್ತು ಪಾಕಿಸ್ತಾನ ಸಾರ್ವಕಾಲಿಕ ಕಾರ್ಯತಂತ್ರದ ಸಹಕಾರಿ ಪಾಲುದಾರರು. ಅಂತರಾಷ್ಟ್ರೀಯ ರಾಜಕೀಯ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲಿ ಅಥವಾ ಸಂಬಂಧಿತ ದೇಶೀಯ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆದರೂ ಚೀನಾ-ಪಾಕಿಸ್ತಾನದ ಸಂಬಂಧ ಯಾವತ್ತೂ ಸದೃಢವಾಗಿರಲಿದೆ ಎಂಬುದನ್ನು ಇತಿಹಾಸವೇ ಹಲವು ಬಾರು ಸಾಬೀತುಪಡಿಸಿದೆ. ಉಭಯ ದೇಶಗಳ ಸಮಗ್ರ ಸಹಕಾರ ಸಂಬಂಧ ಮತ್ತು ಸಿಪಿಇಸಿ ಯೋಜನೆಗಳ ಮೇಲೆ ಪಾಕಿಸ್ತಾನದ ಬಿಕ್ಕಟ್ಟು ಖಂಡಿತಾ ಪರಿಣಾಮ ಬೀರದು ಎಂದವರು ಹೇಳಿದ್ದಾರೆ.







