ಹೈಪರ್ಸಾನಿಕ್ ಅಸ್ತ್ರ ಅಭಿವೃದ್ಧಿಯಲ್ಲಿ ಸಹಯೋಗ: ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಘೋಷಣೆ

photo courtesy:twitter
ಲಂಡನ್: ಹೈಪರ್ಸಾನಿಕ್ ಕ್ಷಿಪಣಿ ಮತ್ತು ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಪ್ರತಿಸ್ಪರ್ಧಿಗಳಾದ ರಶ್ಯ ಮತ್ತು ಚೀನಾ ಕ್ಷಿಪ್ರವಾಗಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಹೊಸ ತ್ರಿಪಕ್ಷೀಯ ಸಹಕಾರ ಸಹಯೋಗಕ್ಕೆ ಚಾಲನೆ ನೀಡಲಾಗುವುದು ಎಂದು ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಘೋಷಿಸಿವೆ.
ಇತ್ತೀಚೆಗೆ ಸಹಿ ಹಾಕಿರುವ ಆಕಸ್ ರಕ್ಷಣಾ ಒಪ್ಪಂದದ ವಿಸ್ತರಣೆಯಾಗಿ ಹೈಪರ್ಸಾನಿಕ್ ಅಸ್ತ್ರ ಅಭಿವೃದ್ಧಿ ಸಹಯೋಗ ಕಾರ್ಯನಿರ್ವಹಿಸಲಿದೆ. ಹೈಪರ್ಸಾನಿಕ್ ಅಸ್ತ್ರ, ಹೈಪರ್ಸಾನಿಕ್ ಅಸ್ತ್ರ ಪ್ರತಿರೋಧಕ ವ್ಯವಸ್ಥೆ, ಇಲೆಕ್ಟ್ರಾನಿಕ್ ಯುದ್ಧಸಾಮರ್ಥ್ಯ ಕ್ಷೇತ್ರವನ್ನು ಉದ್ದೇಶಿಸಿ ನೂತನ ತ್ರಿಪಕ್ಷೀಯ ಸಹಯೋಗ ಆರಂಭವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಸಹಿ ಹಾಕಿದ ಹೇಳಿಕೆ ತಿಳಿಸಿದೆ.
ಶಬ್ದದ ವೇಗಕ್ಕಿಂತ ಐದು ಪಟ್ಟು ಕ್ಷಿಪ್ರವಾಗಿ ಚಲಿಸಬಲ್ಲ ಹೈಪರ್ಸಾನಿಕ್ ಕ್ಷಿಪಣಿಗಳ ಪಥವನ್ನು ಆಕಾಶದಲ್ಲಿ ಹಾರಾಟದಲ್ಲಿದ್ದಾಗಲೂ ಬದಲಿಸಲು ಸಾಧ್ಯವಾಗಿರುವುದರಿಂದ ಅವನ್ನು ಸಾಂಪ್ರದಾಯಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಯಿಂದ ಗುರುತಿಸಲು ಮತ್ತು ಪ್ರತಿಬಂಧಿಸಲು ಬಹುತೇಕ ಅಸಾಧ್ಯವಾಗಿದೆ. ಹೈಪರ್ಸಾನಿಕ್ ಕ್ಷಿಪಣಿಯಲ್ಲಿ ಪರಮಾಣು ಸಿಡಿತಲೆಯನ್ನೂ ಜೋಡಿಸಬಹುದು.
ಹೈಪರ್ಸಾನಿಕ್ ಮತ್ತು ಸಂಬಂಧಿತ ತಂತ್ರಜ್ಞಾನಗಳು ಈಗ ಆಕಸ್ ಸಹಯೋಗದ ಭಾಗವಾಗಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್ ಬುಧವಾರ ಹೇಳಿದ್ದಾರೆ. ಆಸ್ಟ್ರೇಲಿಯಾ ಮತ್ತು ಅಮೆರಿಕ ಈಗಾಗಲೇ ಹೈಪರ್ಸಾನಿಕ್ ಬಗ್ಗೆ ಜತೆಯಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ನೂತನ ತ್ರಿಪಕ್ಷೀಯ ಸಹಕಾರ ಒಪ್ಪಂದದಲ್ಲಿ ಹೊಸತೇನಿದೆ ಎಂಬ ಕುತೂಹಲವಿದೆ. ಬಹುಷಃ ಬ್ರಿಟನ್ನೊಂದಿಗೆ ಸಹಕಾರ ಸಂಬಂಧದ ಹೊಸ ಸಾಧ್ಯತೆಯನ್ನು ಕಂಡುಕೊಂಡಿರಬಹುದು ಎಂದು ಆಸ್ಟ್ರೇಲಿಯಾದ ರಕ್ಷಣಾ ವಿಶ್ಲೇಷಕ ಮಾರ್ಕಸ್ ಹೆಲಯರ್ ಹೇಳಿದ್ದಾರೆ.
ಅಮೆರಿಕದ ಜತೆಗೂಡಿ ಹೈಪರ್ಸಾನಿಕ್ ಅಸ್ತ್ರಗಳನ್ನು ಅಭಿವೃದ್ಧಿಗೊಳಿಸುವ ‘ಸ್ಕಿಫಯರ್’ ಕಾರ್ಯಕ್ರಮಕ್ಕೆ ಶೀಘ್ರ ಚಾಲನೆ ದೊರಕಲಿದೆ ಎಂದು 2020ರ ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ಘೋಷಿಸಿತ್ತು. ಅಧಿಕ ವೇಗದ, ದೀರ್ಘ ದೂರದ ದಾಳಿಯ ಸಾಮರ್ಥ್ಯವುಳ್ಳ, ಸೂಪರ್ಸಾನಿಕ್ ಕ್ಷಿಪಣಿ ಸಹಿತ, ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಗೆ ಸುಮಾರು 7 ಬಿಲಿಯನ್ ಡಾಲರ್ನಷ್ಟು ವಿನಿಯೋಗಿಸಲಾಗುವುದು ಎಂದು ಆಸ್ಟ್ರೇಲಿಯಾ ಸರಕಾರ ಹೇಳಿತ್ತು.





