ಬೆಂಗಳೂರು | ಹಣ ಕಳೆದುಕೊಂಡಿದ್ದಕ್ಕೆ ಮಗನನ್ನು ಬೆಂಕಿ ಹಚ್ಚಿ ಕೊಂದ ತಂದೆ: ವೀಡಿಯೋ ವೈರಲ್

ಬೆಂಗಳೂರು, ಎ.7: ಕೇವಲ 12 ಸಾವಿರ ರೂ. ಕಳೆದುಕೊಂಡಿದ್ದಾನೆ ಎಂಬ ಕಾರಣಕ್ಕೆ ತಂದೆಯೇ ಮಗನಿಗೆ ಬೆಂಕಿ ಹಚ್ಚಿ ಕೊಲೆಗೈದ ಅಮಾನವೀಯ ಪ್ರಕರಣವೊಂದು ಬೆಂಗಳೂರಿನ ಆಝಾದ್ ನಗರದಲ್ಲಿ ನಡೆದಿದ್ದು, ಇದರ ವೀಡಿಯೋ ವೈರಲ್ ಆಗಿದೆ.
ಮೃತರನ್ನು ಅರ್ಪಿತ್ ಎಂದು ಗುರುತಿಸಲಾಗಿದೆ. ಅವರ ತಂದೆ ಸುರೇಂದ್ರ ಕೊಲೆ ಆರೋಪಿಯಾಗಿದ್ದಾನೆ.
ಎ.1ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಹಾಡಹಗಲೇ ರಸ್ತೆಯಲ್ಲೆ ಬೆಂಕಿ ಕಡ್ಡಿ ಗೀರಿ ಮಗನಿಗೆ ಬೆಂಕಿ ಹಚ್ಚಿರುವ ವೀಡಿಯೋ ಇದೀಗ ವೈರಲ್ ಆಗಿದೆ. ಅರ್ಪಿತ್ 12 ಸಾವಿರ ರೂ. ನಗದು ಕಳೆದುಕೊಂಡಿದ್ದರಿಂದ ಸಿಟ್ಟಿಗೆದ್ದ ಆರೋಪಿ ಸುರೇಂದ್ರ ಮಗನ ಮೇಲೆ ಪೆಟ್ರೋಲ್ ಸುರಿದಿದ್ದರೆನ್ನಲಾಗಿದೆ. ಬಳಿಕ ಬೆಂಕಿ ಕಡ್ಡಿ ಗೀರಲು ಆತ ಯತ್ನಿಸುತ್ತಿದ್ದಂತೆ ಮನೆಯಿಂದ ಹೊರ ಬಂದ ಅರ್ಪಿತ್ ರ ಹಿಂದೆಯೇ ಹೊರಬಂದ ಸುರೇಂದ್ರ ಬೆಂಕಿ ಕಡ್ಡಿ ಗೀರಿ ಮಗನ ಮೇಲೆ ಎಸೆಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಂಕಿ ಮೈಮೇಲೆ ಆವರಿಸುತ್ತಿದ್ದಂತೆ ರಸ್ತೆಯಲ್ಲಿ ಬೊಬ್ಬೆ ಹೊಡೆಯುತ್ತಾ ಓಡಾಡಿದ ಅರ್ಪಿತ್ ರನ್ನು ಬಳಿಕ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತೀವ್ರ ಸುಟ್ಟ ಗಾಯಗಳೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರ್ಪಿತ್ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ಆರೋಪಿ ಸುರೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.





