ಸೆಹ್ವಾಗ್ ‘ವಡಾಪಾವ್’ ಟ್ವೀಟ್ ಗೆ ರೋಹಿತ್ ಶರ್ಮಾ ಅಭಿಮಾನಿಗಳ ಅಸಮಾಧಾನ; ಸ್ಪಷ್ಟನೆ ನೀಡಿದ ಭಾರತದ ಮಾಜಿ ಓಪನರ್

Photo:twitter
ಹೊಸದಿಲ್ಲಿ: ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಚಮತ್ಕಾರಿ ಹಾಗೂ ಹಾಸ್ಯದ ಟ್ವೀಟ್ಗಳಿಗೆ ಹೆಸರುವಾಸಿಯಾಗಿದ್ದಾರೆ. ಆದಾಗ್ಯೂ, ಅವರ ಇತ್ತೀಚಿನ 'ವಡಾ ಪಾವ್' ಟ್ವೀಟ್ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ.
ಪುಣೆಯಲ್ಲಿ ಬುಧವಾರ ನಡೆದ ತಮ್ಮ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಅನ್ನು ಐದು ವಿಕೆಟ್ಗಳಿಂದ ಸೋಲಿಸಿತ್ತು. ಈ ವರ್ಷದ ಐಪಿಎಲ್ ನಲ್ಲಿ ತಮ್ಮದೇ ಶೈಲಿಯಲ್ಲಿ ಜಂಟಿ-ವೇಗದ ಅರ್ಧಶತಕವನ್ನು ಬಾರಿಸಿದ್ದ ಕೆಕೆಆರ್ ಆಲ್ ರೌಂಡರ್ ಪ್ಯಾಟ್ ಕಮ್ಮಿನ್ಸ್ ಅವರನ್ನು ಸೆಹ್ವಾಗ್ ಅಭಿನಂದಿಸಿದರು.
ಮುಂಬೈನ ಜನಪ್ರಿಯ ಉಪಹಾರ 'ವಡಾ ಪಾವ್' ಅನ್ನು ಉಲ್ಲೇಖಿಸಿದ್ದ ಸೆಹ್ವಾಗ್ ಕೆಕೆಆರ್ ನ ಗೆಲುವು ಮುಂಬೈ ಆಟಗಾರರ ಬಾಯಿಂದ ವಡಾ ಪಾವ್ ಅನ್ನು ಕಸಿದುಕೊಂಡಂತೆ ಆಗಿದೆ ಎಂದು ಟ್ವೀಟಿಸಿದ್ದರು.
ಸೆಹ್ವಾಗ್ ಅವರ ಟ್ವೀಟ್ ವಿವಾದವನ್ನು ಹುಟ್ಟುಹಾಕಿತು. 'ವಡಾಪಾವ್' ಅನ್ನು ಕಸಿದುಕೊಂಡಂತಾಗಿದೆ ಎಂದು ಟ್ವೀಟಿಸಿದ್ದಕ್ಕೆ ಸೆಹ್ವಾಗ್ ರನ್ನು ರೋಹಿತ್ ಶರ್ಮಾ ಅವರ ಅಭಿಮಾನಿಗಳು ಟೀಕಿಸಿದರು. ಆದಾಗ್ಯೂ, ಕೆಲವು ಗಂಟೆಗಳ ನಂತರ ಮಾಜಿ ಓಪನರ್ ಸೆಹ್ವಾಗ್ ತನ್ನ ಟ್ವೀಟಿಗೆ ಸ್ಪಷ್ಟೀಕರಣವನ್ನು ನೀಡಿದರು ಹಾಗೂ ಮತ್ತೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಿದರು.
ಮುಂಬೈ ಇಂಡಿಯನ್ಸ್ ನಾಯಕನ ಅಭಿಮಾನಿಗಳನ್ನುತಾಳ್ಮೆಯಿಂದಿರುವಂತೆ ಕೇಳಿಕೊಂಡ ಸೆಹ್ವಾಗ್,'ವಡಾ ಪಾವ್' ಉಲ್ಲೇಖವು ಮುಂಬೈಗೆ ಸಂಬಂಧಿಸಿದೆ ಹಾಗೂ ತಾನು ಕೂಡ ಎಲ್ಲರಂತೆ ಭಾರತದ ಹಾಲಿ ನಾಯಕನ ಬ್ಯಾಟಿಂಗ್ನ ದೊಡ್ಡ ಅಭಿಮಾನಿಯಾಗಿದ್ದೇನೆ ಎಂದು ಹೇಳಿದರು.
The Vada Pav reference is for Mumbai, a city which thrives on Vada Pav. Rohit fans thanda lo , I am a bigger fan of his batting much more than most of you guys.
— Virender Sehwag (@virendersehwag) April 6, 2022