ಗೊ.ರು. ಚನ್ನಬಸಪ್ಪ, ಭಾಷ್ಯಂ ಸ್ವಾಮಿ, ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಗೆ ನಾಡೋಜ ಗೌರವ ಪದವಿ

ಗೊ.ರು.ಚ, ಭಾಷ್ಯಂ ಸ್ವಾಮಿ ಹಾಗೂ ಪ್ರೊ.ವೆಂಕಟಾಚಲ ಶಾಸ್ತ್ರಿ
ವಿಜಯನಗರ, ಎ.7: ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಭಾಷ್ಯಂ ಸ್ವಾಮಿ ಹಾಗೂ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ.ರಮೇಶ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಪ್ರಿಲ್ 12ರಂದು ಸಂಜೆ 5:30ಕ್ಕೆ ಕನ್ನಡ ವಿಶ್ವವಿದ್ಯಾನಿಲಯದ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಲಿರುವ 'ನುಡಿಹಬ್ಬ'ದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಡೋಜ ಗೌರವ ಪದವಿ ಪ್ರದಾನ ಮಾಡುವರು. ಚಿತ್ರದುರ್ಗದ ಮುರುಘಾ ಶರಣರು, ಪತ್ರಕರ್ತ ಪದ್ಮರಾಜ ದಂಡಾವತಿ, ಕೆಂಪೇಗೌಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಬಿ.ಎಸ್. ಪುಟ್ಟಸ್ವಾಮಿ, ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ ಹೆಗಡೆ ಅವರಿಗೆ ಡಿ.ಲಿಟ್ ಹಾಗೂ 1387 ವಿದ್ಯಾರ್ಥಿಗಳಿಗೆ ವಿವಿಧ ಪದವಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರದಾನ ಮಾಡುವರು. ಆಂಧ್ರ ಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯದ ಕುಲಪತಿ ತೇಜಸ್ವಿ ವಿ. ಕಟ್ಟೀಮನಿ ಘಟಿಕೋತ್ಸವ ಭಾಷಣ ಮಾಡುವರು ಎಂದು ವಿವರಿಸಿದರು.
ಈ ಬಾರಿ ನಾಡೋಜಕ್ಕೆ ಜಿ. ಕೃಷ್ಣಪ್ಪ, ಮಲೆಯೂರು ಗುರುಸ್ವಾಮಿ, ಡಾ. ಎಸ್.ಸಿ. ಶರ್ಮಾ, ಗುರುಲಿಂಗ ಕಾಪಸೆ, ಡಾ. ಶಿವಾನಂದ ನಾಯಕ, ರಮೇಶ ಎಂ.ಕೆ, ನಾಸಿರ್ ಅಹ್ಮದ್ ಸೇರಿದಂತೆ ಒಟ್ಟು ಹತ್ತು ಮಂದಿಯ ಹೆಸರನ್ನು ಮಾಡಲಾಗಿತ್ತು. ಅಂತಿಮವಾಗಿ ರಾಜ್ಯಪಾಲರು ಮೂವರ ಹೆಸರಿಗೆ ಅಂಕಿತ ಹಾಕಿದ್ದಾರೆ ಎಂದು ಪ್ರೊ.ಸ.ಚಿ.ರಮೇಶ ಹೇಳಿದ್ದಾರೆ.





