ಹಿರ್ಗಾನ: ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಬೋನಿನಲ್ಲಿ ಸೆರೆ

ಕಾರ್ಕಳ, ಎ.7: ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್ ಬೆಟ್ಟುವಿನ ಜನವಸತಿ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಅಡ್ಡಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಗುರುವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದೊಂದು ವಾರದ ಹಿಂದೆ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಚಿರತೆ ಸೆರೆಗೆ ಬೋನು ಇರಿಸಿದ್ದರು. ಇದೀಗ ಚಿರತೆ ಬೋನಿಗೆ ಬೀಳುವ ಮೂಲಕ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕಾರ್ಕಳ ವಲಯ ಅರಣ್ಯಾಧಿಕಾರಿ ಜಿ.ಡಿ.ದಿನೇಶ್ ನೇತೃತ್ವದಲ್ಲಿ, ಪ್ರಕಾಶ್ಚಂದ್ರ, ರಾಘವೇಂದ್ರ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯ ರಕ್ಷಕ ಎ.ಡಿ.ಪೊನ್ನಪ್ಪ, ಅರಣ್ಯ ವೀಕ್ಷಣಾಧಿಕಾರಿ ಶಮೀಮ್, ಬಾಬು ಪೂಜಾರಿ, ಚಾಲಕ ಹಿತೇಶ್ ಕುಮಾರ್ ಅವರ ಯಶಸ್ವಿ ಕಾರ್ಯಾಚರಣೆ ಮತ್ತು ಗ್ರಾಪಂ ಅಧ್ಯಕ್ಷ ಸಂತೋಶ್ ಶೆಟ್ಟಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ಸೆರೆಹಿಡಿಯಲಾಯಿತು.