ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯದಲ್ಲಿ ಡಾ.ಸ್ಯಾಮ್ಯುಯೆಲ್ ಹಾನ್ನಿಮನ್ನರ ಪ್ರತಿಮೆ ಅನಾವರಣ
ವಿಶ್ವ ಹೋಮಿಯೋಪಥಿ ದಿನಾಚರಣೆ

ಕೊಣಾಜೆ, ಎ.7: ಆರೋಗ್ಯ ಕ್ಷೇತ್ರದಲ್ಲಿ ಹೋಮಿಯೋಪತಿ ಔಷಧೀಯ ಪದ್ಧತಿ ವಿಭಿನ್ನವಾಗಿದೆ. ಆರೋಗ್ಯ ಸೇವೆ ನೀಡುವ ಉದ್ದೇಶದೊಂದಿಗೆ ಇರುವ ಹೋಮಿಯೋಪತಿ ಹಲವು ಜನರ ಬಾಳಿಗೆ ಬೆಳಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ಹೋಮಿಯೋಪಥಿ ಜನಕ ಡಾ.ಸ್ಯಾಮ್ಯುಯೆಲ್ ಹಾನ್ನಿಮನ್ನರ 267ನೇ ಜನ್ಮ ದಿನದ ನೆನಪಿಗಾಗಿ ಕಾಲೇಜು ಆವರಣದಲ್ಲಿ ಸ್ಥಾಪಿಸಲಾದ ಸ್ಯಾಮ್ಯುಯೆಲ್ ಹಾನ್ನಿಮನ್ನರ ಪ್ರತಿಮೆಯನ್ನು ಅನಾವರಣಗೊಳಿಸಿ ಬಳಿಕ ವಿಶ್ವ ಹೋಮಿಯೋಪಥಿ ದಿನಾಚರಣೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮಾನವೀಯತೆಗೆ ಸಂದಾಯವಾಗುವ ಔಷಧಿ ಪದ್ಧತಿ ಎಂದಲ್ಲಿ ಅದು ಹೋಮಿಯೋಪತಿ. ಕೋವಿಡ್ ಕಾಲದಲ್ಲಿ ಔಷಧ ಪದ್ಧತಿಯಿಂದ ಜನರ ಮನೋಬಲ ಹೆಚ್ಚಿಸಲು ಸಂಸ್ಥೆ ಶ್ರಮಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಕೋವಿಡ್ ಕಾಲದಲ್ಲಿ ಸಂಸ್ಥೆ ಗ್ರಾಮೀಣ ಭಾಗಗಳಲ್ಲಿ ಶ್ರಮಿಸಿದ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಸೇವಾಸಂಸ್ಥೆಯ ನಿರ್ದೇಶಕ ಫಾ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ, ದ.ಕ. ಜಿಲ್ಲಾಡಳಿತ ಕೋವಿಡ್ ನಿರ್ಮೂಲನೆಗೆ ಸಹಕರಿಸಿದ ಹಾಗೂ ಜಿಲ್ಲಾಧಿಕಾರಿಯ ಅವಿರತ ಶ್ರಮ ಜಿಲ್ಲೆಯ ಜನ ಮೆರಯುವಂತಿಲ್ಲ. ಸಂಸ್ಥೆಯೂ ಇಂತಹ ಸೇವಾ ಕಾರ್ಯದಲ್ಲಿ ಜತೆ ನೀಡಿರುವುದು ಸಂಸ್ಥೆಯ ಹಿರಿಮೆ ಹೆಚ್ಚಿಸಿದೆ ಎಂದರು.
ಪ್ರತಿಷ್ಠಿತ ‘ಡಾ.ಬಾತ್ರಾ ಪ್ರಾಯೋಜಿಸಿದ ಮುಕೇಶ್ ಬಾತ್ರಾ ವಿದ್ಯಾರ್ಥಿ ವೇತನ’ ವನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ನಡೆಸಿರುವ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಪಡೆಯುವ ಮೂಲಕ ರ್ಯಾಂಕ್ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಆಶ್ರಿತಾ ಬಿ.ಎ. ಮತ್ತು ರಿಯಾ ಗ್ರೇಸ್ ಹಾಗೂ ಸುಧೀರ್ ಕೆ. ಇವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಮೆ ಪ್ರಾಯೋಜಿಸಿದ ನೂತನವಾಗಿ ಸ್ಥಾಪನೆಗೊಂಡ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹೋಮಿಯೋಪಥಿ, ಕೊಲ್ಕತ್ತ ಇದರ ಮಾಜಿ ನಿರ್ದೇಶಕ ಡಾ. ಶಶಿಕಾಂತ್ ತಿವಾರಿ ಮತ್ತು ಅವರ ಪತ್ನಿ ಸವಿತಾ ತಿವಾರಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹೋಮಿಯೋಕೇರ್ ಇಂಟರ್ ನ್ಯಾಶನಲ್ ಲಿಮಿಟೆಡ್, ತಮಿಳುನಾಡು ಮುಖ್ಯಸ್ಥ ಡಾ. ಮಗೇಶ್‍ಪತಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರೋಶನ್ ಕ್ರಾಸ್ತಾ, ಉಪ ಆಡಳಿತಾಧಿಕಾರಿ ಫಾ.ರೋಹನ್ ಡಾಯಸ್, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಇ.ಎಸ್.ಜೆ. ಪ್ರಭು ಕಿರಣ್, ಉಪಪ್ರಾಂಶುಪಾಲ ಡಾ. ವಿಲ್ಮಾ ಮೀರಾ ಡಿಸೋಜ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಡಾ.ಅರುಣ್ ವರ್ಗೀಸ್ ಸ್ವಾಗತಿಸಿದರು. ಡಾ.ದೀಪಾ ರೆಬೆಲ್ಲೊ ಹಾಗೂ ಡಾ. ಮನೀಷ್ ತಿವಾರಿ ಕಾರ್ಯಕ್ರಮವನ್ನು ನಿರೂಪಿಸಿದರು.
ವಿಶ್ವ ಹೋಮಿಯೋಪಥಿ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಎ.9ರಂದು ಹೋಮಿಯೋಪಥಿ ಬಗ್ಗೆ ಜಾಗೃತಿ ಮೂಡಿಸಲು ಬೀದಿನಾಟಕ ಹಾಗೂ ದೇರಳಟ್ಟೆ, ಅಸೈಗೋಳಿ, ಕುತ್ತಾರ್ ವರೆಗೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.