60 ವರ್ಷ ವಯಸ್ಸಿನ ಅಕ್ಷರದಾಸೋಹ ಸಿಬ್ಬಂದಿಯ ಕಡ್ಡಾಯ ನಿವೃತ್ತಿಗೆ ಸಿಐಟಿಯು ವಿರೋಧ
ಎ.11ರಂದು ದ.ಕ. ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ

ಮಂಗಳೂರು : ಅಕ್ಷರ ದಾಸೋಹದ ಯೋಜನೆಯಡಿ ಅಡುಗೆಯಾಳುಗಳಾಗಿ ಕೆಲಸ ಮಾಡುವ 60 ವರ್ಷ ವಯಸ್ಸಿನ ಮಹಿಳೆಯರನ್ನು ಕಡ್ಡಾಯವಾಗಿ ನಿವೃತ್ತಿಯ ಹೆಸರಿನಲ್ಲಿ ಕೆಲಸದಿಂದ ಬಿಡುಗಡೆ ಮಾಡುವ ಸರಕಾರದ ಧೋರಣೆ ಖಂಡನೀಯ ಎಂದು ಸಿಐಟಿಯು ದ.ಕ.ಜಿಲ್ಲಾ ಸಮಿತಿಯ ಉಪಾಧ್ಯಕ್ಷ ವಸಂತ ಆಚಾರಿ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಧ್ಯಾಹ್ನದ ಬಿಸಿಯೂಟ ಯೋಜನೆಯು ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಮಕ್ಕಳ ಗೈರು ಹಾಜರಾತಿ ತಡೆಗೆ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಡುಗೆಯಾಳುಗಳು ಶ್ರಮಿಸುತ್ತಾ ಬಂದಿದ್ದಾರೆ. ಇದೀಗ 60 ವರ್ಷ ಪ್ರಾಯ ತುಂಬಿದ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆಯರನ್ನು ನಿವೃತ್ತಿಯ ಹೆಸರಿನಲ್ಲಿ ಕೆಲಸದಿಂದ ಬಿಡುಗಡೆ ಮಾಡುವುದು ಅಮಾನವೀಯ ಮತ್ತು ವಂಚನೆಯಾಗಿದೆ ಎಂದರು.
೨೦೦೧-೦೨ರಲ್ಲಿ ಅಡುಗೆ ಕೆಲಸಕ್ಕೆ ಸೇರ್ಪಡೆ ಮಾಡಿಕೊಂಡಾಗ ವಿದ್ಯಾಭ್ಯಾಸ ಮತ್ತು ವಯಸ್ಸಿನ ಅರ್ಹತೆಯನ್ನು ಮಾತ್ರ ನಿಗದಿಪಡಿಸಲಾಗಿತ್ತು. ಅದರ ಕೈಪಿಡಿಯಲ್ಲಿ ನಿವೃತ್ತಿ ವಯಸ್ಸನ್ನು ನಮೂದಿಸಿರಲಿಲ್ಲ. ಆದಾಗ್ಯೂ ಸಿಐಟಿಯು ಸಂಯೋಜಿತ ಅಕ್ಷರ ದಾಸೋಹ ನೌಕರರ ಸಂಘವು ೨೦೧೬ರಿಂದ ವಯಸ್ಸಿನ ಆಧಾರದಲ್ಲಿ ನಿವೃತ್ತಿ ಸೌಲಭ್ಯ ಕೊಡಬೇಕು ಎಂದು ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಈ ಮಧ್ಯೆ ಬಿಸಿಯೂಟ ನೌಕರರ ವೇತನದಲ್ಲಿ ೧೦೦ ರೂ. ಮತ್ತು ಸರಕಾರದ ೧೦೦ ರೂ. ಸೇರಿಸಿ ಎಲ್‌ಐಸಿ ಮೂಲಕ ವಿಶೇಷ ಪಿಂಚಣಿ ಯೋಜನೆಯನ್ನು ರೂಪಿಸಲು ಒಪ್ಪಿಗೆ ಸೂಚಿಸಲಾಗಿತ್ತು. ಅದಕ್ಕಾಗಿ ಸಿಐಟಿಯು ಸಂಘಟನೆಯನ್ನು ಒಳಗೊಂಡ ಸಮಿತಿಯನ್ನೂ ರಚಿಸಲಾಗಿತ್ತು. ಆದರೆ ಅದು ಅನುಷ್ಠಾನಗೊಳ್ಳುವ ಮುನ್ನವೇ ಏಕಾಏಕಿ ಬಿಸಿಯೂಟ ನೌಕರರನ್ನು ಕೆಲಸದಿಂದ ನಿವೃತ್ತಿ ಮಾಡುತ್ತಿರುವುದು ಖಂಡನೀಯವಾಗಿದೆ. ಇದರಿಂದ ರಾಜ್ಯದಲ್ಲಿ ಸುಮಾರು ೧೨ ಸಾವಿರ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ. ಸರಕಾರ ತಕ್ಷಣ ಈ ಸುತ್ತೋಲೆಯನ್ನು ವಾಪಸ್ ಪಡೆಯಬೇಕು. ಅಲ್ಲದೆ ನಿವೃತ್ತಿ ವೇತನ ನಿಗದಿ ಮಾಡುವವರೆಗೆ ೧ ಲಕ್ಷ ರೂ. ಪರಿಹಾರ ನೀಡಬೇಕು ಎಂದು ವಸಂತ ಆಚಾರಿ ಆಗ್ರಹಿಸಿದ್ದಾರೆ.
ಎ.11ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗುವುದು. ಅದಕ್ಕೆ ಸರಕಾರ ಸ್ಪಂದಿಸದಿದ್ದರೆ ಎ.೧೮ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಸಂಯೋಜಿತ ಅಕ್ಷರದಾಸೋಹ ನೌಕರರ ಸಂಘದ ದ.ಕ.ಜಿಲ್ಲಾಧ್ಯಕ್ಷೆ ಭವ್ಯಾ, ಪ್ರಧಾನ ಕಾರ್ಯದರ್ಶಿ ಗಿರಿಜಾ, ಗೌರವ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕೋಶಾಧಿಕಾರಿ ರತ್ನಮಾಲಾ, ಜಿಲ್ಲಾ ಸಮಿತಿಯ ಸದಸ್ಯೆ ಜಯಶ್ರೀ ಉಪಸ್ಥಿತರಿದ್ದರು.