ಅಲ್-ಖಾಯಿದ, ಆರಗ ಜ್ಞಾನೇಂದ್ರ ಹೇಳಿಕೆಗೂ ವ್ಯತ್ಯಾಸವಿಲ್ಲ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್
''ಶಾಂತಿ ಕದಡುವ ಪ್ರಯತ್ನ ಮಾಡಬೇಡಿ''

ಆರಗ ಜ್ಞಾನೇಂದ್ರ |ಅಜಯ್ ಮಾಕನ್
ಬೆಂಗಳೂರು, ಎ. 7: ‘ಅಲ್-ಖಾಯಿದ,' ಹಾಗೂ ‘ಹಿಜಾಬ್' ವಿಚಾರದಲ್ಲಿ ಮೊದಲು ಒಂದು ವಿಚಾರ ಸ್ಪಷ್ಟಪಡಿಸುತ್ತೇವೆ. ಹಿಜಾಬ್ ವಿಚಾರವಾಗಿ ಅಲ್ ಖಾಯಿದ ಸಂಘಟನೆ ನಾಯಕರ ಹೇಳಿಕೆಯನ್ನು ಕಟುವಾಗಿ ಖಂಡಿಸುತ್ತೇವೆ. ಅಲ್-ಖಾಯಿದ ನಿಷೇಧಿತ ಉಗ್ರ ಸಂಘಟನೆ. ಆ ಸಂಘಟನೆಗೆ ಭಾರತದ ಆಂತರಿಕ ವಿಚಾರವಾಗಿ ಮಾತನಾಡುವ ಯಾವುದೇ ಹಕ್ಕಿಲ್ಲ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ಸ್ಪಷ್ಟಣೆ ನೀಡಿದ್ದಾರೆ.
ಗುರುವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದ ವಿಚಾರವನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ, ಹೊರಗಿನವರ ಹಸ್ತಕ್ಷೇಪ ಅಗತ್ಯವಿಲ್ಲ. ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಡೆಯನ್ನು ಖಂಡಿಸುತ್ತೇವೆ. ಇವರಿಬ್ಬರೂ ಮಾಡುತ್ತಿರುವುದು ಒಂದೇ ಆಗಿದೆ. ಇವರಿಬ್ಬರೂ ತಮ್ಮ ಹೇಳಿಕೆ ಮೂಲಕ ದೇಶದ ವಾತಾವರಣ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಇವರು ಇಲ್ಲಿ ಬಲಪಂಥೀಯರಾದರೆ, ಅಲ್-ಖಾಯಿದ ಆ ದೇಶದ ಬಲಪಂಥೀಯರಾಗಿದ್ದಾರೆ. ಒಂದು ಬಲಪಂಥೀಯರು, ಮತ್ತೊಂದು ಬಲಪಂಥೀಯರಿಗೆ ಸಹಾಯ ಮಾಡುತ್ತಿದ್ದಾರೆ' ಎಂದು ದೂರಿದರು.
‘ಕರ್ನಾಟಕ ರಾಜ್ಯ ಅದರದೇ ಆದ ಸಂಸ್ಕೃತಿಯನ್ನು ಹೊಂದಿದೆ. ಇದೇ ಕಾರಣಕ್ಕೆ ಈ ಪ್ರದೇಶ ವಿಶ್ವದ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಈ ವಾತಾವರಣವನ್ನು ಕದಡಿ ಬೆಂಗಳೂರಿನ ಘನತೆ ನಾಶ ಮಾಡಬೇಡಿ. ಇದು ಕೇವಲ ಘನತೆ ಮಾತ್ರವಲ್ಲ ರಾಜ್ಯದ ಆರ್ಥಿಕತೆಯನ್ನು ನಾಶ ಮಾಡುತ್ತದೆ. ಉನ್ನತ ಶಿಕ್ಷಣ ಸಚಿವರ ಹೇಳಿಕೆ ಯಾವ ಸಂದೇಶ ನೀಡುತ್ತಿದೆ? ಇವರು ಅಲ್ ಖಾಯಿದ ಮಾಡುತ್ತಿರುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ ಖಾಯಿದ ಅವರು ಹೇಗೆ ಪರಿಸ್ಥಿತಿಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೋ ಅದೇ ರೀತಿ ಇವರು ತಮ್ಮ ಮಾತುಗಳಿಂದ ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಇವರು ತಮ್ಮ ಧರ್ಮಕ್ಕೆ ಅತಿರೇಕದ ಹೆಜ್ಜೆ ಇಟ್ಟರೆ, ಅಲ್ಲಿ ಅವರು ಅವರ ಧರ್ಮಕ್ಕಾಗಿ ಅತಿರೇಕದ ಹೆಜ್ಜೆ ಇಡುತ್ತಿದ್ದಾರೆ. ಹಾಗಾದರೆ ಇವರಿಬ್ಬರ ನಡುವೆ ವ್ಯತ್ಯಾಸ ಎಲ್ಲಿದೆ? ರಾಜ್ಯದ ಘನತೆ, ಭವಿಷ್ಯ ಉಳಿಸಲು ದಯಮಾಡಿ ಶಾಂತಿ ಕದಡುವ ಪ್ರಯತ್ನ ಮಾಡಬೇಡಿ. ಇದರಿಂದ ಹಣದುಬ್ಬರ, ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ’ ಎಂದು ಟೀಕಿಸಿದರು.
‘ಹಲಾಲ್, ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧ, ಧ್ವನಿವರ್ಧಕ ನಿಷೇಧ ವಿಚಾರಗಳ ಬಗ್ಗೆ ರಾಜ್ಯ ಸರಕಾರ ಈಗ ಏಕೆ ಈ ವಿಚಾರಗಳನ್ನು ಪ್ರಸ್ತಾಪಿಸುತ್ತಿದೆ. ಕಾರಣ, ಅವರ ವೈಫಲ್ಯಗಳು. ಶೇ.40ರಷ್ಟು ಕಮಿಷನ್ ಭ್ರಷ್ಟಾಚಾರದ ಆರೋಪದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ಪ್ರಯತ್ನ ಮಾಡುತ್ತಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿರುವ ರಾಜ್ಯ ಕರ್ನಾಟಕವಾಗಿದೆ. ಬೆಲೆ ಏರಿಕೆ ವಿಚಾರವನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಇಬ್ಬರು ಸಂಪುಟ ಸಚಿವರ ಮೇಲಿನ ಭ್ರಷ್ಟಾಚಾರದ ಆರೋಪವನ್ನು ಬೇರೆಡೆಗೆ ಸೆಳೆಯಲು ಈ ಕೆಲಸ ಮಾಡುತ್ತಿದ್ದಾರೆ' ಎಂದು ಅವರು ದೂರಿದರು.
‘ಸಾಮಾನ್ಯ ಜನರು ತಮ್ಮ ಸಮಸ್ಯೆಗಳ ಬಗ್ಗೆ ಸರಕಾರವನ್ನು ಪ್ರಶ್ನೆ ಮಾಡದಂತೆ ತಡೆಯಲು, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಯಶಸ್ಸಿನ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಪ್ರಯತ್ನಿಸುತ್ತಿದ್ದಾರೆ. ಆದರೆ ಕರ್ನಾಟಕ ರಾಜ್ಯದ ಜನ ಪ್ರಬುದ್ಧರಾಗಿದ್ದು, ಬಿಜೆಪಿ ಹಾಗೂ ಆರೆಸೆಸ್ಸ್ ಷಡ್ಯಂತ್ರಗಳಿಗೆ ಅವರು ಸಿಲುಕುವುದಿಲ್ಲ ಎಂಬ ವಿಶ್ವಾಸವಿದೆ’ ಎಂದು ಅವರು ಉತ್ತರಿಸಿದರು.
‘ಕಾಂಗ್ರೆಸ್ ಪಕ್ಷವು ಜನರ ಸಮಸ್ಯೆಗಳನ್ನು ಅವರ ಮುಂದೆ ಇಟ್ಟು ಹೋರಾಟ ಮಾಡುತ್ತೇವೆ. ಅದೇ ಕಾರಣಕ್ಕಾಗಿ ನಾನು ಬೆಲೆ ಏರಿಕೆ ವಿಚಾರವಾಗಿ ಮಾತನಾಡಲು ದಿಲ್ಲಿಯಿಂದ ಇಲ್ಲಿಗೆ ಆಗಮಿಸಿದ್ದೇನೆ. ನಾವು ದೇಶದಾದ್ಯಂತ ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದೇವೆ. ಇಂತಹ ಜನಪರ ವಿಚಾರಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟು ಮಾಧ್ಯಮಗಳು ಸಹಕಾರ ನೀಡಬೇಕು. ಜೇಬು, ಹೊಟ್ಟೆಪಾಡು ಹಾಗೂ ಉದ್ಯೋಗದ ವಿಚಾರ ಬಂದರೆ ಜನ ಖಂಡಿತವಾಗಿಯೂ ಎಚ್ಚೆತ್ತುಕೊಳ್ಳುತ್ತಾರೆ’ ಎಂದು ಅವರು ತಿಳಿಸಿದರು.
‘ಪಂಚರಾಜ್ಯ ಚುನಾವಣೆಯಲ್ಲಿ ಜನ ಈ ವಿಚಾರವಾಗಿ ತಲೆಕೆಡಿಸಿಕೊಂಡಿಲ್ಲ, ಕರ್ನಾಟಕದಲ್ಲಿ ಜನ ಚಿಂತನೆ ನಡೆಸುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಖಂಡಿತವಾಗಿಯೂ ತಲೆ ಕೆಡಿಸಿಕೊಳ್ಳುತ್ತಾರೆ. ಈ ವಿಚಾರಗಳನ್ನು ರಾಜ್ಯದಲ್ಲಿ ಜನರ ಮುಂದೆ ಇಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಇದರಿಂದ ಬಿಜೆಪಿ ಭಯಭೀತರಾಗಿರುವ ಕಾರಣಕ್ಕೆ ಅವರು ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಾರೆ’ ಎಂದು ಹೇಳಿದರು.
‘ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ನಾವು ಈಗ ಎಪ್ರಿಲ್ 1ರಿಂದ ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯನ್ನು ಮಾತ್ರ ನಾವು ಪ್ರಶ್ನಿಸಿದ್ದೇವೆ. ಈ ಎಲ್ಲ ಬೆಲೆ ಏರಿಕೆಗಳ ಅಂತಿಮ ಪರಿಣಾಮವೇ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್, ರಸಗೊಬ್ಬರ ಬೆಲೆ ಹೆಚ್ಚಿದರೆ, ಅದು ರೈತರ ಮೇಲೆ ಪರಿಣಾಮ ಬೀರುತ್ತದೆ. ಆಗ ಆಹಾರ ಪದಾರ್ಥಗಳ ದರವು ಹೆಚ್ಚುತ್ತದೆ’ ಎಂದು ಅವರು ತಿಳಿಸಿದರು.







