ಉತ್ತರ ಪ್ರದೇಶ: ಪೂರ್ವಜರ ಜಮೀನು ಸ್ವಾಧೀನ ವಿರೋಧಿಸಿ ಬುಲ್ಡೋಜರ್ ಮುಂದೆ ಮಲಗಿದ ನ್ಯಾಯಾಧೀಶರ ಅಮಾನತು

Photo: Twitter/yadavakhilesh
ಹೊಸದಿಲ್ಲಿ: ತಮ್ಮ ಪೂರ್ವಜರ ಭೂಮಿಯನ್ನು ರಾಜ್ಯ ಸರಕಾರ ಅಭಿವೃದ್ಧಿ ಯೋಜನೆಗೆ ಸ್ವಾಧೀನಗೊಳಿಸುವುದನ್ನು ವಿರೋಧಿಸಿ ಬುಲ್ಡೋಜರ್ ಮುಂದೆ ಅಂಗಾತವಾಗಿ ನೆಲದ ಮೇಲೆ ಮಲಗಿದ ಸುಲ್ತಾನಪುರ್ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಮನೋಜ್ ಕುಮಾರ್ ಶುಕ್ಲಾ ಅವರನ್ನು ಅಲಹಾಬಾದ್ ಹೈಕೋರ್ಟ್ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಛಪ್ಪಿಯ ಶುಕ್ಲಾ ಗ್ರಾಮದವರಾಗಿರುವ ಶುಕ್ಲಾ ಅವರ ಪೂರ್ವಜರ ಜಮೀನನ್ನು ಹರಿಯಾ-ರಾಜವಾಹ ಸರಯೂ ಕಾಲುವೆ ನಿರ್ಮಾಣಕ್ಕಾಗಿ ಜಿಲ್ಲಾಡಳಿತ ಸ್ವಾಧೀನಪಡಿಸಿತ್ತು. ಸರಯೂ ನಹರ್ ರಾಷ್ಟ್ರೀಯ ಯೋಜನೆಯ ಭಾಗವಾಗಿ ಈ ಕಾಲುವೆ ನಿರ್ಮಿಸಲಾಗುತ್ತಿದ್ದು ಈ ಯೋಜನೆಯನ್ನು ಕಳೆದ ವರ್ಷದ ಡಿಸೆಂಬರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.
ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾದ ಜಮೀನುಗಳಲ್ಲಿ ಶುಕ್ಲಾ ಅವರ ತಂದೆ ಜಗದೀಶ್ ಪ್ರಸಾದ್ ಶುಕ್ಲಾ ಅವರಿಗೆ ಸೇರಿದ್ದ ಜಮೀನು ಕೂಡ ಇತ್ತು. ಪರಿಹಾರ ಚೆಕ್ ಸಿದ್ಧವಾಗಿತ್ತು ಹಾಗೂ ನ್ಯಾಯಾಧೀಶರ ತಂದೆಗೆ ಅದನ್ನು ಸಂಗ್ರಹಿಸುವಂತೆ ಸೂಚಿಸಲಾಗಿತ್ತು. ಅವರು ಅಲ್ಲಿಗೆ ಬಂದಿದ್ದರೂ ಚೆಕ್ ಸ್ವೀಕರಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಮಗಾರಿ ನಡೆಯುತ್ತಿರುವಾಗ ಕೋಟ್ ಹಾಗೂ ಟೈ ಧರಿಸಿದ್ದ ನ್ಯಾಯಾಧೀಶ ಶುಕ್ಲಾ ಬುಲ್ ಡೋಜರ್ ಮುಂದೆ ಜಮೀನಿನಲ್ಲಿ ಅಡ್ಡ ಮಲಗಿ ಬಿಟ್ಟಿದ್ದರು. ಅಲ್ಲಿಯೇ ಇಡೀ ರಾತ್ರಿ ಅವರು ಅನ್ನಾಹಾರವಿಲ್ಲದೆ ಕಳೆದಿದ್ದರು.
ತಮ್ಮ ತಂದೆಯ ಜಮೀನನ್ನು ನಿಯಮ ಮೀರಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಈ ಕುರಿತ ಆದೇಶ ಸರಿಯಲ್ಲ ಎಂದು ಶುಕ್ಲಾ ವಾದಿಸಿದ್ದಾರೆ.
ಈ ಘಟನೆಯ ವರದಿಯನ್ನು ಬಸ್ತಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ರಾಜ್ಯ ಸರಕಾರಕ್ಕೆ ಕಳುಹಿಸಿದ್ದರು. ನಂತರ ವರದಿಯನ್ನು ಅಲಹಾಬಾದ್ ಹೈಕೋರ್ಟಿಗೆ ರವಾನಿಸಲಾಗಿತ್ತು.
ಇದನ್ನೂ ಓದಿ: ಆಕಾರ್ ಪಟೇಲ್ ವಿರುದ್ಧ ಲುಕ್ ಔಟ್ ಸುತ್ತೋಲೆ ತಕ್ಷಣವೇ ಹಿಂಪಡೆಯಿರಿ- ನ್ಯಾಯಾಲಯ ಆದೇಶ