ಉಪ್ಪಿನಂಗಡಿಯ ಯುವಕನ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ತಿರುವು: ಕಮಿಷನರ್ ಹೇಳಿದ್ದೇನು ?

ಮಂಗಳೂರು, ಎ.7: ಮಣಿಪಾಲ ಸಮೀಪದ ಇಂದ್ರಾಳಿಯಲ್ಲಿ ವಾರದ ಹಿಂದೆ ಯುವಕನೋರ್ವ ರೈಲಿನಡಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ತಿರುವು ಪಡೆದಿದ್ದು, ತಂಡವೊಂದು ಮೊಬೈಲ್ ಕಸಿದು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿರುವ ಕಾರಣಕ್ಕೆ ನೊಂದು ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಉಪ್ಪಿನಂಗಡಿ ಹಿರೇಬಂಡಾಡಿ ನಿವಾಸಿ ಪುರುಷೋತ್ತಮ ಯಾನೆ ಪ್ರಶಾಂತ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲೋಹಿತ್, ಚಿದಾನಂದ, ಧನರಾಜ್, ಉಮೇಶ್, ಶಫೀಕ್ ಮತ್ತು ಇತರರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪುರುಷೋತ್ತಮ ಸುರತ್ಕಲ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆಯ ವಿವರ: ಸುರತ್ಕಲ್ ನಲ್ಲಿ ಡಾಂಬರ್ ಲಾರಿಯ ಚಾಲಕನಾಗಿದ್ದ ಪುರುಷೋತ್ತಮಗೆ ವೈಯಕ್ತಿಕ ಕಾರಣಗಳಿಗೆ ಸಂಬಂಧಿಸಿದಂತೆ ಲೋಹಿತ್ ಎಂಬಾತ ಮೊಬೈಲ್ ಕಸಿದುಕೊಂಡಿದ್ದು, ಬಳಿಕ ಚಿದಾನಂದ, ಉಮೇಶ, ಧನರಾಜ್, ಶಫೀಕ್ ಮತ್ತು ಇತರರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದರು. ಇದರಿಂದ ಮನನೊಂದು ಸುರತ್ಕಲ್ ನಿಂದ ಉಡುಪಿಗೆ ತೆರಳಿ ಅಲ್ಲಿನ ಬಸ್ ನಿಲ್ದಾಣ ಬಳಿಯ ಬಾರ್ ವೊಂದರಲ್ಲಿ ಮಧ್ಯಾಹ್ನದಿಂದ ರಾತ್ರಿಯ ವರೆಗೆ ಮದ್ಯಪಾನ ಮಾಡಿ ಬಳಿಕ ಮನೆಯವರು ಹಾಗೂ ಸ್ನೇಹಿತರಿಗೆ ಫೋನ್ ಮಾಡಿ ಸಾಯುವುದಾಗಿ ತಿಳಿಸಿ, ಅಲ್ಲಿಗೆ ಸಮೀಪದ ಇಂದ್ರಾಳಿಯ ರೈಲು ನಿಲ್ದಾಣದ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ ಎಂದು ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಸಿದು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.







