ಕುಡಿಯುವ ನೀರಿನ ಸಮಸ್ಯೆಎದುರಾಗದಂತೆ ಕ್ರಮ ವಹಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು : ಪ್ರಸಕ್ತ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಎದುರಾಗದಂತೆ ಜಿಲ್ಲೆಯ ತಾಲೂಕುಗಳಲ್ಲಿರುವ ಟಾಸ್ಕ್ ಪೋರ್ಸ್ ಸಮಿತಿಯು ಕಾಲ ಕಾಲಕ್ಕೆ ಸಭೆ ನಡೆಸಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ತಹಶೀಲ್ದಾರರಿಗೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಬೆಸಿಗೆಯಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಬೇಕು, ಅದಕ್ಕಾಗಿ ತಾಲೂಕುಗಳಲ್ಲಿ ಟಾಸ್ಕ್‌ಫೋರ್ಸ್ ಸಮಿತಿಯ ಸಭೆಯನ್ನು ನಡೆಸಬೇಕು. ಜಿಲ್ಲೆಯ ಜಾನುವಾರುಗಳಿಗೆ ಮೇವು ಹಾಗೂ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಆಸ್ಪತ್ರೆಗಳಲ್ಲಿ ಅವಘಡಗಳು ಸಂಭಸಿದಾಗ ತಕ್ಷಣ ಪ್ರತಿಕ್ರಿಯಿಸಬೇಕು, ಅದಕ್ಕೆ ಪೂರ್ವಭಾವಿಯಾಗಿ ಅಣುಕು ಪ್ರದರ್ಶನಗಳನ್ನು ಮಾಡಬೇಕು, ಕಟ್ಟಡಗಳಲ್ಲಿ ಕೆಲಸ ಮಾಡುವಾಗ ಯಾವೂದೇ ರೀತಿಯ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಡಿಸಿ ಸೂಚಿಸಿದರು.
ಎಂಆರ್‌ಪಿಎಲ್ ಹಾಗೂ ಎಂಸಿಎಫ್‌ನಂತಹ ಕಾರ್ಖಾನೆಗಳು ಅನಿಲ ಸೋರಿಕೆಯಾಗದಂತೆ ಜಾಗೃತೆ ವಹಿಸುವುದರೊಂದಿಗೆ ಅಣಕು ಪ್ರದರ್ಶನವನ್ನು ನಡೆಸಲು ಕ್ರಮ ವಹಿಸಬೇಕು ಎಂದರು.
ಸಭೆಯಲ್ಲಿ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ, ಮಂಗಳೂರು ಮನಪಾ ಆಯುಕ್ತ ಅಕ್ಷಿ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.







