ಬೆಂಗಳೂರು | ವಿಲಾಸಿ ಜೀವನ ನಡೆಸಲು ಕಳವು: ಆರೋಪಿಯ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.7: ವಿಲಾಸಿ ಜೀವನ ನಡೆಸಲು ಕಳ್ಳತನ ಮಾಡಿದ ಆರೋಪದಡಿ ಓರ್ವನನ್ನು ಕೆಪಿ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿ, 4.90 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ನಗರದ ಕೆಫೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆಪಿ ಅಗ್ರಹಾರ ನಿವಾಸಿ ನವೀನ್ಕುಮಾರ್ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.
ನವೀನ್ ಅವರ ತಾಯಿಗೆ ಈತ ಕಳವು ಮಾಡಿದ ಮನೆ ಮಾಲಕ ಶಿವಶಂಕರಯ್ಯ ಪತ್ನಿ ಪರಿಚಯಸ್ಥರಾಗಿದ್ದರು. ಇಬ್ಬರ ಮನೆಯೂ ಒಂದೇ ಪ್ರದೇಶದಲ್ಲಿತ್ತು. ಹಾಗಾಗಿ ಶಿವಶಂಕರಯ್ಯ ಮನೆಗೆ ಆಗಾಗ ನವೀನ್ಕುಮಾರ್ ಬಂದು ಹೋಗುತ್ತಿದ್ದ.
ಅದೇರೀತಿ ಮಾರ್ಚ್ 11 ರಂದು ಶಿವಶಂಕರಯ್ಯ ಮನೆಯಲ್ಲಿ ಯಾರು ಇಲ್ಲದಿರುವ ಸಮಯ ನೋಡಿಕೊಂಡು ಮನೆಯಲ್ಲಿದ್ದ 109 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾನೆ. ಆದರೆ, ಮನೆಯಲ್ಲಿ ಆಭರಣ ಕಳುವಾಗಿರುವುದು ಮನೆಯವರ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಒಡವೆ ಹಾಕಿಕೊಳ್ಳಲು ನೋಡಿದಾಗ ಕಾಣೆಯಾಗಿರುವುದು ಅರಿವಿಗೆ ಬಂದಿದೆ. ನಂತರ ಮನೆ ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ನವೀನ್ ಮೇಲೆ ಮನೆ ಮಾಲಕರು ಶಂಕೆ ವ್ಯಕ್ತಪಡಿಸಿದ್ದರು.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಈ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.







