ತೀರ್ಥಹಳ್ಳಿ ಕ್ಷೇತ್ರದ ಗೌರವ ಉಳಿಸಲು ಆರಗ ರಾಜೀನಾಮೆ ಕೊಡಲಿ: ಕಿಮ್ಮನೆ ರತ್ನಾಕರ್

ಶಿವಮೊಗ್ಗ, ಏ.07: ತೀರ್ಥಹಳ್ಳಿ ಕ್ಷೇತ್ರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಳಂಕ ಎಂದು ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಿಮ್ಮನೆ ರತ್ನಾಕರ್ ಆಕ್ರೋಶ ಹೊರ ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರಕ್ಕೆ ಒಳ್ಳೆಯ ಪೋಸ್ಟ್ ಸಿಕ್ಕಿದೆ ಎಂದು ಖುಷಿ ಪಟ್ಟಿದ್ದೆ. ನಾನೇ ಸನ್ಮಾನ ಸಹ ಮಾಡಿದ್ದೆ. ತೀರ್ಥಹಳ್ಳಿ ಪ್ರಜ್ಞಾವಂತ ಮತದಾರರು ಇರುವ ಕ್ಷೇತ್ರ. ಶಾಂತವೇರಿ ಗೋಪಾಲಗೌಡರ ಹೆಸರು ಹೇಳದೇ ಅಧಿವೇಶನ ಸಹ ನಡೆಯಲ್ಲ. ಆದರೆ, ಇಂದು ಆರಗ ಜ್ಞಾನೇಂದ್ರ ನಮ್ಮ ಕ್ಷೇತ್ರಕ್ಕೆ ಕಳಂಕ ತರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಜನರು ಆರಗ ಜ್ಞಾನೇಂದ್ರ ಅವರನ್ನು ಬೈಯ್ಯುತ್ತಿದ್ದಾರೆ. ತೀರ್ಥಹಳ್ಳಿ ಕ್ಷೇತ್ರಕ್ಕೆ ನೀವು ರಾಜೀನಾಮೆ ಕೊಟ್ಟು ತೀರ್ಥಹಳ್ಳಿ ಗೌರವವನ್ನು ಉಳಿಸಿ. ಸರ್ಕಾರದ ಭಾಗವಾಗಿರುವ ಸಚಿವರು, ಶಾಸಕರು, ಮುಖಂಡರು ಶಾಂತಿ- ಸುವ್ಯವಸ್ಥೆ ಕಾಪಾಡಬೇಕು. ಆಡಳಿತ ಪಕ್ಷದವರೇ ಕೋಮುಗಲಭೆ ಸೃಷ್ಟಿಸುತ್ತಿರುವುದು ದೇಶದ ದುರಂತ.
ಓರ್ವ ಗೃಹ ಸಚಿವರಾಗಿ ಕೋಮು ಭಾವನೆ ಕೆರಳಿಸುವಂತೆ ಹೇಳಿಕೆ ಕೊಡ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಮಿನಿಸ್ಟರ್ ಹೀಗೆ ಮಾತಾಡಿದ್ರೆ ಹೇಗೆ? ಹೋಮ್ ಮಿನಿಸ್ಟರ್ ಇರೋದು ಕೋಮು ಭಾವನೆ ಸೃಷ್ಟಿಸೋಕಾ ಅಥವಾ ಕಡಿಮೆ ಮಾಡೋಕಾ ಇವರ ವಿರುದ್ದವೇ ಕೇಸ್ ದಾಖಲಿಸಬೇಕು. ಸಿಎಂ ಇವರನ್ನು ವಜಾ ಮಾಡಬೇಕಿತ್ತು ಎಂದರು.
ಗೃಹ ಸಚಿವರಾಗಿ ಚುಚ್ಚಿ-ಚುಚ್ಚಿ ಕೊಲೆ ಮಾಡ್ತಾರೆ ಅಂತಾರೆ. ಚಂದ್ರು ಉರ್ದು ಮಾತಾಡಲಿಲ್ಲ ಎಂದು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ಮುಗಿಬೀಳಲಿ ಎನ್ನುವ ಉದ್ದೇಶವಿದೆ. ಗೃಹಸಚಿವರ ವಿರುದ್ಧವೇ ದೇಶದ್ರೋಹದ ಕೇಸ್ ದಾಖಲಿಸಬೇಕು. ಅವರ ರಾಜೀನಾಮೆಗೆ ಒತ್ತಾಯಿಸಿ, ಏ.08ರಂದು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್,ಪಾಲಿಕೆ ಆಡಳಿತ ಪಕ್ಷದ ನಾಯಕಿ ಯಮುನಾ ರಂಗೇಗೌಡ,ಪಾಲಿಕೆ ಸದಸ್ಯೆ ರೇಖಾ ರಂಗನಾಥ್,ಕಾಂಗ್ರೆಸ್ ಮುಖಂಡರಾದ ಎಸ್‌ಪಿ ದಿನೇಶ್,ವಿಜಯ್‌ಕುಮಾರ್(ದನಿ),ರಂಗೇಗೌಡ,ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ಇದ್ದರು







