ರಸ್ತೆ ಅಪಘಾತ ; ಬೈಕ್ ಸವಾರ ಮೃತ್ಯು
ಕಾರ್ಕಳ : ಬೈಕೊಂದು ಟಿಪ್ಪರ್ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬಸ್ಸೊಂದರ ಮುಂಭಾಗಕ್ಕೆ ಢಿಕ್ಕಿ ಹೊಡೆದು ಬಳಿಕ ರಸ್ತೆ ಬದಿ ನಿರ್ಮಿಸಿದ ಸಿಮೆಂಟ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಘಾಟಿಯ ಓಟೆಹಳ್ಳ ಎಂಬಲ್ಲಿ ಬುಧವಾರ ನಡೆದಿದೆ. ಸಹಸವಾರ ನಂದೇಶ್‌ಗೂ ಗಾಯಗಳಾಗಿವೆ.
ಮೃತರನ್ನು ಬೈಕ್ ಸವಾರ ನಿತೇಶ್ (23) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಬೆಳಗ್ಗೆ ಮಾಳ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶೃಂಗೇರಿ ಕಡೆಯಿಂದ ಮಾಳದತ್ತ ಅತಿವೇಗದಿಂದ ಬರುತಿದ್ದು, ರಸ್ತೆಯ ತಿರುವಿನಲ್ಲಿ ಎದುರಿನಿಂದ ಹೋಗುತಿದ್ದ ಟಿಪ್ಪರ್ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಬೈಕ್‌ನ್ನು ರಸ್ತೆ ಬಲಬದಿಗೆ ತಂದಾಗ ಎದುರಿನಿಂದ ಶೃಂಗೇರಿಯತ್ತ ಸಾಗುತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯ ಸಿಮೆಂಟ್ ಕಂಬಕ್ಕೆ ಬಡಿದಿತ್ತು.
ಇದರಿಂದ ತಲೆಗೆ ತೀವ್ರ ಸ್ವರೂಪದ ಗಾಯಗಳಾದ ನಿತೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





