ಅಣ್ಣನ ಕೊಲೆಗೈದ ತಮ್ಮನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಹೊಸಪೇಟೆ(ವಿಜಯನಗರ), ಎ.7: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣನ ಹತ್ಯೆ ಮಾಡಿರುವುದು ಸಾಬೀತಾಗಿರುವುದರಿಂದ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದ ಸಿದ್ದನಗೌಡ ಎಂಬುವರಿಗೆ ಹೊಸಪೇಟೆ 3ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಕೋರ್ಟ್ ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
1 ಲಕ್ಷ ರೂ.ದಂಡ, ದಂಡ ಕಟ್ಟಲಾಗದಿದ್ದಲ್ಲಿ ಮೂರು ವರ್ಷ ಸಾದಾ ಶಿಕ್ಷೆ, ಮೃತ ಬಸವನಗೌಡ ಅವರ ಪತ್ನಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ 4 ಲಕ್ಷ ರೂ. ಪರಿಹಾರ ನೀಡಬೇಕೆಂದು ಸೂಚಿಸಿದ್ದಾರೆ.
ಸಿದ್ದನಗೌಡ ಹಾಗೂ ಆರ್. ಬಸವನಗೌಡ ಅವರ ತಂದೆ ಕೆಂಚನಗೌಡ ತೀರಿಕೊಂಡ ನಂತರ ಇಬ್ಬರೂ ಸಹೋದರರ ನಡುವೆ ಆಸ್ತಿ ಹಂಚಿಕೆ ಸಂಬಂಧ ಜಗಳವಾಗಿದೆ. 2016ರ ಎಪ್ರಿಲ್ 28ರಂದು ಸಂಜೆ 7.30ರ ಸುಮಾರಿಗೆ ಬಸವನಗೌಡ ತನ್ನ ಮನೆಯ ಅಂಗಳದಲ್ಲಿ ನಿಂತಿದ್ದಾಗ, ಸಿದ್ದನಗೌಡ ಹಿಂದಿನಿಂದ ಬಂದು ಜಾಲಿ ಕಟ್ಟಿಗೆಯಿಂದ ಕಿವಿಯ ಎಡಭಾಗಕ್ಕೆ ಬಲವಾಗಿ ಹೊಡೆದಿದ್ದರು. ಬಳಿಕ ಬಸವನಗೌಡ ಕಲ್ಲುಗಳು ಮೇಲೆ ಬಿದ್ದು, ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರಕಾರ ಪರವಾಗಿ ಸರಕಾರಿ ಅಭಿಯೋಜಕ ಟಿ. ಅಂಬಣ್ಣ ನ್ಯಾಯಾಲಯದಲ್ಲಿ ವಾದ ಮಾಡಿದ್ದಾರೆ.







