ಬೆಂಗಳೂರು | ಮಹಿಳೆಯರನ್ನು ದುಬೈಗೆ ಸಾಗಿಸುತ್ತಿದ್ದ ಜಾಲ ಪತ್ತೆ: 7 ಮಂದಿ ಆರೋಪಿಗಳ ಬಂಧನ

ಬೆಂಗಳೂರು, ಎ.7: ದುಬೈನಲ್ಲಿ ಹೆಚ್ಚಿನ ವೇತನ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಯರ ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು, 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಪ್ಪಳದ ಕಂಪಲಿಯ ಬಸವರಾಜ ಶಂಕರಪ್ಪ ಕಳಸದ್(43), ಮೈಸೂರಿನ ನಜರಾಬಾದ್ ನಿವಾಸಿ ಆದರ್ಶ(23), ತಮಿಳುನಾಡಿನ ಸೇಲಂನ ರಾಜೇಂದ್ರ ನಾಚಿಮುತ್ತು(32), ಚೆನ್ನೈನ ಮಾರಿಯಪ್ಪನ್(35), ಪಾಂಡಿಚೇರಿಯ ಅಶೋಕ್(29), ತಿರುವಳ್ಳುರ್ ರಾಜೀವ್ ಗಾಂಧಿ(35) ಹಾಗೂ ಜೆಪಿನಗರದ ಚಂದು(25) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ.
ಆರೋಪಿಗಳಲ್ಲಿ ಮೂವರು ಕಾರ್ಯಕ್ರಮ ಆಯೋಜನೆ ಮಾಡುವ ಉದ್ಯಮಿಗಳಾಗಿದ್ದು, ಇದೇ ಉದ್ಯಮದ ಹೆಸರಿನಲ್ಲಿ ದುಬೈಗೆ ಮಹಿಳೆಯರನ್ನು ಕಳ್ಳ ಸಾಗಾಣೆ ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದರು.
ಮಹಿಳೆಯರು ಮಾತ್ರವಲ್ಲ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ಮೂಲದ ಕಿರಿಯ ಮಹಿಳಾ ಕಲಾವಿದರನ್ನು ಗುರಿಯಾಗಿಸಿಕೊಂಡು ಆರೋಪಿಗಳ ಜಾಲವು ಪಾಸ್‍ಪೋರ್ಟ್ ಮಾಡಿಸಿ ದುಬೈಗೆ ಕಳಿಸುತ್ತಿತ್ತು ಎಂದರು.
ಇಲ್ಲಿಯವರೆಗೆ ಸುಮಾರು 95 ಮಂದಿ ಮಹಿಳೆಯರನ್ನು ಕಳುಹಿಸಿರುವ ಈ ಜಾಲವು, ದುಬೈಗೆ ಹೋದ ಬಳಿಕ ಮಹಿಳೆಯರಿಗೆ ಶೋಷಣೆ ಮಾಡಲಾಗುತ್ತಿತ್ತು. ಈ ಸಂಬಂಧಿಸಿದಂತೆ ಬಂದ ಖಚಿತವಾದ ಮಾಹಿತಿಯನ್ನು ಆಧರಿಸಿ ಡಿಸಿಪಿ ಡಾ.ಶರಣಪ್ಪ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರಿಂದ 1 ಲಕ್ಷ ನಗದು, 17 ಪಾಸ್ ಪೋರ್ಟ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.







