ಶಕ್ತಿಧಾಮದ ಅಭಿವೃದ್ದಿಗೆ 5 ಕೋಟಿ. ರೂ.: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

ಮೈಸೂರು,ಎ.7: ಹೆಣ್ಣು ಮಕ್ಕಳ ಅಭಿವೃದ್ಧಿಗೆ ಬಜೆಟ್‍ನಲ್ಲಿ ಸಾಕಷ್ಟು ಹಣ ಮೀಸಲಿಟ್ಟಿದ್ದು, ಶಕ್ತಿಧಾದ ಅಭಿವೃದ್ಧಿಗೂ 5 ಕೋಟಿ ರೂ. ನೀಡಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಶಕ್ತಿಧಾಮದ ಮಕ್ಕಳನ್ನು ಅನಾಥರೆಂದು ಕರೆಯಬಾರದು. ಇವರು ದೇವರ ಮಕ್ಕಳು. ಹೆಣ್ಣು ಮಕ್ಕಳ ಅಭಿವೃದ್ಧಿಗೆ ಬಜೆಟ್‍ನಲ್ಲಿ ಸಾಕಷ್ಟು ಹಣ ಮೀಸಲಿಟ್ಟಿದ್ದೇನೆ. ಹಾಗೆಯೇ ಶಕ್ತಿಧಾಮಕ್ಕೂ ಸರ್ಕಾರ 5 ಕೋಟಿ ರೂಪಾಯಿ ನೀಡಲಿದೆ ಎಂದು ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮದಲ್ಲಿ ಗುರುವಾರ ನೂತನವಾಗಿ ನಿರ್ಮಾಣವಾಗಿರುವ ಇನ್ಫೋಸಿಸ್ ಫೌಂಡೇಶನ್ ಕಟ್ಟಡದ ಲೋಕಾರ್ಪಣೆ ಹಾಗೂ ಶಕ್ತಧಾಮದ ವಿದ್ಯಾಶಾಲಾ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಕ್ತಿಧಾಮದ ಮಕ್ಕಳನ್ನು ಅನಾಥರೆಂದು ಕರೆಯಬಾರದು. ಇವರು ದೇವರ ಮಕ್ಕಳು, ಜನ್ಮ ಪೂರ್ವದ ಸಂಬಂಧ ಇರುವುದು ತಾಯಿ ಜೊತೆ ಇದೆ. ಈ ಸಂಬಂಧ ಎಲ್ಲವನ್ನೂ ಕೊಟ್ಟು ಬೆಳೆಸುತ್ತದೆ. ದುರ್ದೈವ ಮತ್ತು ನೋವಿನ ಸಂಗತಿ ಅಂದರೆ ಹೆಣ್ಣಿನ ಶೋಷಣೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಯೋಗ ಕೂಡಿ ಬಂದು ಶಕ್ತಿಧಾಮ ಬೆಳೆಯುತ್ತಿದೆ. ಸರ್ಕಾರ ಮತ್ತು ಸಮಾಜ ಮಾಡುವ ಕೆಲಸವನ್ನು ಶಕ್ತಿಧಾಮ ಮಾಡುತ್ತಿದೆ ಎಂದು ಬೊಮ್ಮಾಯಿ ಹೇಳಿದರು.
ಪುನೀತ್ ರಾಜ್‍ಕುಮಾರ್‍ಗೆ ತಾಯಿ ಕರುಳು ಇತ್ತು. ನಮ್ಮನ್ನೆಲ್ಲಾ ಅಗಲಿದ್ದರೂ ಎಲ್ಲೋ ಕುಳಿತು ಶಕ್ತಿ ತುಂಬುತ್ತಿದ್ದಾರೆ. ಬದುಕಿನ ಬ್ಯಾಲೆನ್ಸ್ ಶೀಟ್‍ನಂತೆ ನಾವು ಬೆಳೆಯುತ್ತೇವೆ, ಬ್ಯಾಲೆನ್ಸ್ ಮಾಡಿಕೊಂಡು ಹೋದವರಿಗೆ ಸಂತೃಪ್ತಿ ಇರುತ್ತದೆ. ಪ್ರತಿಯೊಬ್ಬರೂ ಇದನ್ನು ರೂಢಿಸಿಕೊಳ್ಳಬೇಕು ಎಂದು ಪುನೀತ್ ರಾಜ್‍ಕುಮಾರ್ ಅವರನ್ನು ಸ್ಮರಿಸಿದರು.
ನಟ ಶಿವರಾಜ್ ಕುಮಾರ್ ಮಾತನಾಡಿ ಅಪ್ಪಾಜಿ ಕಟ್ಟಿದ ಶಕ್ತಿಧಾಮಕ್ಕೆ ಯುಕ್ತಿಯಾಗಿ ನಿಲ್ಲುತ್ತೇನೆ. ನಮಗೆ ದುಃಖ ಆದಾಗಲೆಲ್ಲಾ ಶಕ್ತಿಧಾಮಕ್ಕೆ ಬರುತ್ತೀವಿ. ಅಪ್ಪುನ ಈ ಮಕ್ಕಳಲ್ಲಿ ನೋಡುತ್ತೀವಿ ಎಂದು ಹೇಳಿದರು
ಇಲ್ಲಿನ ಮಕ್ಕಳಲ್ಲಿ ಕೆಲವರು ಅಣ್ಣ ಅನ್ನುತ್ತಾರೆ, ಕೆಲವರು ಅಪ್ಪ ಅನ್ನುತ್ತಾರೆ. ನನ್ನ ಉಸಿರು ಇರೋವರೆಗೂ ಶಕ್ತಿಧಾಮ ಬಿಡಲ್ಲ. ಶಕ್ತಿಧಾಮದಕ್ಕೆ ಕಟ್ಟಡ ಕಟ್ಟಿಸಿಕೊಟ್ಟ ಸುಧಾಮೂರ್ತಿ ಸಹಕಾರ ದೊಡ್ಡದು. ಬೊಮ್ಮಾಯಿ ಸರ್ ಕಾಮನ್ ಮ್ಯಾನ್. ನಾನು ಯಾವತ್ತೂ ಇಂತ ಸಿಎಂ ನೋಡಲಿಲ್ಲ. ಹಾಗಂತ ನಾನು ಈ ಹಿಂದೆ ಸಿಎಂ ಆದವರು ಸರಿ ಇಲ್ಲ ಅಂತ ಹೇಳುತ್ತಿಲ್ಲ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಬೊಮ್ಮಾಯಿಯವರು ತುಂಬಾ ಸಿಂಪಲ್. ನಮ್ಮ ಕುಟುಂಬದ ಮೇಲೆ ಅಪಾರ ಗೌರವ ಇಟ್ಟಿದ್ದಾರೆ. ಅಪ್ಪು ಅಂತ್ಯಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು. ಭಾವನೆಗಳನ್ನು ಡ್ರಾಮಾದ ಮೂಲಕ ತೋರಿಸಲು ಸಾಧ್ಯವಿಲ್ಲ. ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಅವರ ಸಹಾಯ ಇರುತ್ತೆ ಎಂದು ಭಾವಿಸಿದ್ದೇನೆ ಎಂದು ಶಿವರಾಜ್ ಕುಮಾರ್ ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು. ಶಕ್ತಿಧಾಮ ಟ್ರಸ್ಟ್ ಅಧ್ಯಕ್ಷೆ ಗೀತಾ ಶಿವರಾಜ್ ಕುಮಾರ್, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಇನ್‍ಫೋಸಿಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಷಾಜಿ ಮ್ಯಾಥ್ಯೂ , ಖಾದಿ ಗ್ರಾಮೋದ್ಯೋಗ ನಿಮಗದ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ, ಶಕ್ತಿಧಾಮದ ಟ್ರಸ್ಟಿಗಳಾದ ಜಯದೇವ್, ಕೆಂಪಯ್ಯ, ಸುಮನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.







