ಫ್ರಾನ್ಸ್: ಲ್ಯಾಂಡಿಂಗ್ ಸಂದರ್ಭ ನಿಯಂತ್ರಣ ಕಳೆದುಕೊಂಡ ವಿಮಾನ : ತಪ್ಪಿದ ಅನಾಹುತ

ಹೊಸದಿಲ್ಲಿ, ಎ.7: ನ್ಯೂಯಾರ್ಕ್‌ನಿಂದ ಪ್ಯಾರಿಸ್‌ಗೆ ಪ್ರಯಾಣಿಸುತ್ತಿದ್ದ ಫ್ರಾನ್ಸ್‌ನ ವಿಮಾನ ಪ್ಯಾರಿಸ್‌ನಲ್ಲಿ ಇಳಿಯುತ್ತಿದ್ದ ಸಂದರ್ಭ ಪೈಲಟ್ ವಿಮಾನದ ಮೇಲಿನ ನಿಯಂತ್ರಣ ಕಳೆದುಕೊಂಡಾಗ ವಿಮಾನ ಅಪಘಾತಕ್ಕೀಡಾಗುವುದು ಕೂದಲೆಳೆಯಷ್ಟು ಅಂತರದಿಂದ ತಪ್ಪಿದ ಘಟನೆ ಮಂಗಳವಾರ ನಡೆದಿರುವುದಾಗಿ ವರದಿಯಾಗಿದೆ. ವಿಮಾನದ ನಿಯಂತ್ರಣ ಕಳೆದುಕೊಂಡಾಗ ಪೈಲಟ್ ‘ ನಿಲ್ಲಿಸಿ, ನಿಲ್ಲಿಸಿ’ ಎಂದು ಗಾಭರಿಯಿಂದ ತನ್ನ ಸಹೋದ್ಯೋಗಿಗೆ ಕರೆ ನೀಡಿರುವುದು ವಿಮಾನದ ಕಾಕ್‌ಪಿಟ್ ರೆಕಾರ್ಡ್‌ರ್‌ನಲ್ಲಿ ದಾಖಲಾಗಿದೆ.
ಏರ್‌ಫ್ರಾನ್ಸ್‌ನ ಬೋಯಿಂಗ್ 777 ವಿಮಾನ ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡಿಂಗ್ ಆಗಬೇಕು ಎನ್ನುವಷ್ಟರಲ್ಲಿ ತನ್ನ ಸೂಚನೆಗೆ ಸ್ಪಂದಿಸದಿರುವುದು ಪೈಲಟ್‌ನ ಗಮನಕ್ಕೆ ಬಂದಿದೆ. ಈ ವೇಳೆ ವಿಮಾನ ಒಂದೇ ಸಮನೆ ಎಡಬದಿಗೆ ವಾಲಿಕೊಂಡಿದ್ದು ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿ ಮತ್ತು ವಿಮಾನದ ಕಾಕ್‌ಪಿಟ್‌ನಲ್ಲಿನ ಸಿಬಂದಿಗಳ ನಡುವಿನ ಸಂಭಾಷಣೆ ಸಂಭವನೀಯ ಅಪಾಯದ ಸಾಧ್ಯತೆಯನ್ನು ಪ್ರತಿಬಿಂಬಿಸುತ್ತಿತ್ತು.
ಒಂದು ಹಂತದಲ್ಲಿ ಪೈಲಟ್ ವಿಮಾನದ ಇತರ ಸಿಬಂದಿಗಳನ್ನು ಉದ್ದೇಶಿಸಿ ‘ನಿಲ್ಲಿಸಿ, ನಿಲ್ಲಿಸಿ’ ಎಂದು ಗಾಭರಿಯಿಂದ ಕಿರುಚಿದ್ದರು. ವಿಮಾನ ನಮ್ಮ ಆಜ್ಞೆಗೆ ಸ್ಪಂದಿಸುತ್ತಿಲ್ಲ. ರಾಡಾರ್‌ನ ಮಾರ್ಗದರ್ಶನದೊಂದಿಗೆ ಅಂತಿಮ ವಿಧಾನವನ್ನು ಪುನರಾರಂಭಿಸಲು ಸಿದ್ಧರಾಗಿದ್ದೇವೆ’ ಎಂದು ಪೈಲಟ್ ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸಿದ್ದರು.
ಅಂತಿಮ ಹಂತದಲ್ಲಿ ವಿಮಾನದಲ್ಲಿ ಕಂಡುಬಂದ ‘ವಿಮಾನ ನಿಯಂತ್ರಣದ ಅಸ್ಥಿರತೆ’ ಸಮಸ್ಯೆಗೆ ಕಾರಣವಾಗಿದ್ದು ಇದು ಅತ್ಯಂತ ಅಪಾಯಕಾರಿ ಸ್ಥಿತಿಯಾಗಿದೆ ಎಂದು ಫ್ರಾನ್ಸ್‌ನ ವಿಮಾನಯಾನ ಸುರಕ್ಷಾ ನಿಗಾ ಪ್ರಾಧಿಕಾರ (ಬಿಇಎ) ಹೇಳಿದೆ. ವಿಮಾನವು ಭೂಮಿಗೆ ಸುಮಾರು 1,200 ಅಡಿಯಷ್ಟು ಹತ್ತಿರವಾದಾಗ ಅದೃಷ್ಟವಶಾತ್ ನಿಯಂತ್ರಣಕ್ಕೆ ಬಂದು ಪೈಲಟ್‌ನ ಆದೇಶಗಳಿಗೆ ಸ್ಪಂದಿಸಿದೆ . ಇದೊಂದು ಗಂಭೀರ ಪ್ರಕರಣ ಎಂದು ಬಿಇಎ ಅಧಿಕಾರಿಗಳು ಹೇಳಿದ್ದಾರೆ.







