ಭಾರತದ ಹೈಕಮಿಷನ್ ಹಸ್ತಕ್ಷೇಪ ಆರೋಪ: ಮೆಲ್ಬೋರ್ನ್ ವಿವಿ ಎಐಐಗೆ 13 ಶಿಕ್ಷಣ ತಜ್ಞರ ರಾಜೀನಾಮೆ

ಹೊಸದಿಲ್ಲಿ, ಎ.7: ಮೆಲ್ಬೋರ್ನ್ ವಿವಿಯ ಆಸ್ಟ್ರೇಲಿಯಾ ಇಂಡಿಯಾ ಇನ್‌ಸ್ಟಿಟ್ಯೂಟ್(ಎಐಐ)ಗೆ 13 ಶಿಕ್ಷಣ ತಜ್ಞರು ರಾಜೀನಾಮೆ ನೀಡಿದ್ದು ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಆಸ್ಟ್ರೇಲಿಯಾದಲ್ಲಿನ ಭಾರತದ ಹೈಕಮಿಷನ್ ಹಸ್ತಕ್ಷೇಪ ನಡೆಸುತ್ತಿರುವುದು ರಾಜೀನಾಮೆಗೆ ಕಾರಣ ಎಂದಿದ್ದಾರೆ.
ಶಿಕ್ಷಣ ತಜ್ಞರ ತಂಡ ಮಾರ್ಚ್ 29ರಂದು ರಾಜೀನಾಮೆ ನೀಡಿದ್ದು ಮೆಲ್ಬೋರ್ನ್ ವಿವಿ ಕುಲಪತಿ ಡಂಕನ್ ಮಾಸ್ಕೆಲ್‌ಗೆ ರವಾನಿಸಿರುವ ಪತ್ರದಲ್ಲಿ ‘ಭಾರತದ ಹೈಕಮಿಷನ್ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಪದೇ ಪದೇ ಹಸ್ತಕ್ಷೇಪ ನಡೆಸುತ್ತಿದೆ. ಅಲ್ಲದೆ ಭಾರತದ ಕುರಿತ ಹೊಗಳಿಕೆ ಇಲ್ಲದ ಅಭಿಪ್ರಾಯ, ಅವಲೋಕನಗಳನ್ನು ತಡೆಹಿಡಿಯುವ ಪ್ರಯತ್ನ ನಡೆಸುತ್ತಿದೆ’ ಎಂದು ಉಲ್ಲೇಖಿಸಿರುವುದಾಗಿ ಆಸ್ಟ್ರೇಲಿಯಾದ ‘ದಿ ಏಜ್’ ಪತ್ರಿಕೆ ವರದಿ ಮಾಡಿದೆ.
ವಿವಿಯ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಈ ಶಿಕ್ಷಣ ತಜ್ಞರು ವೇತನ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದರು. ಭಾರತ- ಆಸ್ಟ್ರೇಲಿಯಾ ದ್ವಿಪಕ್ಷೀಯ ಸಂಬಂಧಗಳ ಮೇಲೆ ಎಐಐ ಗಮನಹರಿಸುವುದು ಮೋದಿ ಸರಕಾರಕ್ಕೆ ಅಸಮಾಧಾನ ಉಂಟು ಮಾಡಬಹುದಾದ ವಿಷಯಗಳಲ್ಲಿ ತೊಡಗಿಸಿಕೊಳ್ಳುವ ಶಿಕ್ಷಣ ತಜ್ಞರಿಗೆ ಅಡ್ಡಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ 2020ರಲ್ಲಿ ವಿವಿಯ ಉಪಕುಲಪತಿ ಮೈಕೆಲ್ ವೆಸ್ಲೆ ಅವರಿಗೂ ಪತ್ರ ರವಾನೆಯಾಗಿತ್ತು ಎಂದು ಪತ್ರಿಕೆ ವರದಿ ಮಾಡಿದೆ.
ಶೈಕ್ಷಣಿಕ ಸ್ವಾತಂತ್ರ್ಯ, ವಿದ್ವಾಂಸರ ಭಿನ್ನಾಭಿಪ್ರಾಯ, ನಿಷ್ಪಕ್ಷಪಾತ ಮತ್ತು ಸ್ವಾಯತ್ತೆ ಮುಂತಾದ ಮೌಲ್ಯಗಳು ಎಐಐಯ ಭವಿಷ್ಯದಲ್ಲಿ ಸ್ಥಾನ ಪಡೆಯಲಿವೆ ಎಂದು ನಿರೀಕ್ಷಿಸುತ್ತೇವೆ. ಭಾರತದ ಕೇಂದ್ರ ಸರಕಾರವು ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ದೇಶದ್ರೋಹದ ಕಾನೂನನ್ನು ಬಳಸುವುದನ್ನು ಮತ್ತು ಸಾಕ್ಷ್ಯಾಧಾರಗಳಿಲ್ಲದೆ ಪತ್ರಕರ್ತರು, ಶಿಕ್ಷಣ ತಜ್ಞರು ಮತ್ತು ಮಾನವ ಹಕ್ಕು ಹೋರಾಟಗಾರರನ್ನು ಜೈಲಿನಲ್ಲಿಡುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಭಾರತ-ಆಸ್ಟ್ರೇಲಿಯಾ ದ್ವಿಪಕ್ಷೀಯ ಬಾಂಧವ್ಯವನ್ನು ಸಶಕ್ತಗೊಳಿಸುವ ಉದ್ದೇಶದಿಂದ 2009ರಲ್ಲಿ ಎಐಐ ಸ್ಥಾಪನೆಯಾಗಿದೆ.







