ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದ ಲಕ್ನೊ
ಕ್ವಿಂಟನ್ ಡಿಕಾಕ್ ಆಕರ್ಷಕ ಅರ್ಧಶತಕ

Photo: twitter
ನವಿ ಮುಂಬೈ, ಎ.7: ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್ (80 ರನ್,52 ಎಸೆತ, 9 ಬೌಂಡರಿ, 2 ಸಿಕ್ಸರ್) ಗಳಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಐಪಿಎಲ್ನ 15ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್ಗಳ ಅಂತರದಿಂದ ಮಣಿಸಿತು.
ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 150 ರನ್ ಗುರಿ ಪಡೆದಿದ್ದ ಲಕ್ನೊ 19.4 ಓವರ್ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 155 ರನ್ ಗಳಿಸಿ ಗೆಲುವಿನ ನಗೆ ಬೀರಿತು. ನಾಯಕ ಕೆ.ಎಲ್.ರಾಹುಲ್(24 ರನ್, 25 ಎಸೆತ)ರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 73 ರನ್ ಸೇರಿಸಿದ ಡಿಕಾಕ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಡೆಲ್ಲಿ ತಂಡವು ಆರಂಭಿಕ ಬ್ಯಾಟರ್ ಪೃಥ್ವಿ ಶಾ(61 ರನ್,34 ಎಸೆತ), ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ (ಔಟಾಗದೆ 39, 36 ಎಸೆತ)ಹಾಗೂ ಸರ್ಫರಾಝ್ ಖಾನ್(ಔಟಾಗದೆ 36, 28 ಎಸೆತ)ಅವರ ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಲಕ್ನೊ ವಿರುದ್ಧ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 149 ರನ್ ಕಲೆ ಹಾಕಿತು.
ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ(61 ರನ್,34 ಎಸೆತ, 9 ಬೌಂಡರಿ, 2 ಸಿಕ್ಸರ್)ಡೇವಿಡ್ ವಾರ್ನರ್(4 ರನ್, 12 ಎಸೆತ)ಮೊದಲ ವಿಕೆಟ್ಗೆ 67 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಆದರೆ ಶಾ, ವಾರ್ನರ್ ಹಾಗೂ ರೋವ್ಮನ್ ಪೊವೆಲ್(3 ರನ್)ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿದಾಗ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತ್ತು.
ಆಗ 4ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 75 ರನ್ ಸೇರಿಸಿದ ರಿಷಭ್ ಪಂತ್ (ಔಟಾಗದೆ 39, 36 ಎಸೆತ, 3 ಬೌಂ., 2 ಸಿ.)ಹಾಗೂ ಸರ್ಫರಾಝ್ ಖಾನ್(ಔಟಾಗದೆ 36, 28 ಎಸೆತ, 3 ಬೌಂ.) ತಂಡದ ಮೊತ್ತವನ್ನು 149 ರನ್ಗೆ ತಲುಪಿಸಿದರು.
ಲಕ್ನೋ ಪರ ರವಿ ಬಿಷ್ಣೋಯಿ(2-22)ಯಶಸ್ವಿ ಬೌಲರ್ ಎನಿಸಿಕೊಂಡರು.







