ಸಿಎನ್‌ಜಿ ಬೆಲೆ ಏರಿಕೆ: ದಿಲ್ಲಿಯ ಕ್ಯಾಬ್, ಆಟೊ ಚಾಲಕರಿಂದ ಮುಷ್ಕರದ ಎಚ್ಚರಿಕೆ

ಹೊಸದಿಲ್ಲಿ, ಎ. 7: ಕೇಂದ್ರ ಸರಕಾರ ಸಿಎನ್‌ಜಿಗೆ ಸಬ್ಸಿಡಿ ಒದಗಿಸದೇ ಇದ್ದರೇ ಅಥವಾ ಪ್ರಯಾಣ ದರ ಹೆಚ್ಚಿಸಿದೇ ಇದ್ದರೆ ನಗರದಲ್ಲಿ ಎಪ್ರಿಲ್ 18ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ನಗರದ ಆಟೊ, ಕ್ಯಾಬ್ ಹಾಗೂ ಟ್ಯಾಕ್ಸಿ ಚಾಲಕರು ಎಚ್ಚರಿಕೆ ನೀಡಿದ್ದಾರೆ.
ಸಿಎನ್‌ಜಿ ದರ ಏರಿಕೆಯ ವಿರುದ್ಧ ಕೇಂದ್ರ ಸರಕಾರ ಹಾಗೂ ನಗರಾಡಳಿತದ ವಿರುದ್ಧ ಜಂತರ್ ಮಂತರ್‌ನಲ್ಲಿ ಶುಕ್ರವಾರ ಹಾಗೂ ದಿಲ್ಲಿ ಸೆಕ್ರೇಟರಿಯೇಟ್ ಎದುರು ಎಪ್ರಿಲ್ 11ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಆಟೊ, ಕ್ಯಾಬ್ ಹಾಗೂ ಟ್ಯಾಕ್ಸಿ ಚಾಲಕರ ಸಂಘಟನೆ ಹೇಳಿದೆ.
ದಿಲ್ಲಿ-ಎನ್‌ಸಿಆರ್‌ನ 4 ಲಕ್ಷ ಚಾಲಕರು ಸದಸ್ಯರಾಗಿದ್ದಾರೆ ಎಂದು ಪ್ರತಿಪಾದಿಸುತ್ತಿರುವ ‘ಸರ್ವೋದಯ ಚಾಲಕರ ಕಲ್ಯಾಣ ಸಂಘಟನೆ’ಯ ರವಿ ರಾಥೋಡ್, ಸಿಎನ್‌ಜಿ ಬೆಲೆ ಇಳಿಕೆ ಅಥವಾ ಪ್ರಯಾಣ ದರ ಏರಿಕೆಯ ತಮ್ಮ ಆಗ್ರಹ ಈಡೇರದೇ ಇದ್ದರೆ, ಸಂಘಟನೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದೆ ಎಂದು ಹೇಳಿದೆ.
‘‘ಓಲಾ ಹಾಗೂ ಉಬರ್ ದರ ಕಳೆದ 7-8 ವರ್ಷಗಳಿದ ಪರಿಷ್ಕರಣೆಯಾಗಿಲ್ಲ. ಇದನ್ನು ಹಾಗೂ ತೈಲ ಬೆಲೆ ಏರಿಕೆ ವಿರೋಧಿಸಿ ನಾವು ನಾಳೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಿದ್ದೇವೆ’’ ಎಂದು ರಾಥೋಡ್ ಹೇಳಿದ್ದಾರೆ.







