ಸಹಕಾರಿ ಸಂಘಗಳಿಗೆ ಹಣಕಾಸು ಸಂಸ್ಥೆಗಳ ಪೈಪೋಟಿ: ಲೋಕಪ್ಪ ಗೌಡ
ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಉಡುಪಿ : ಸಹಕಾರಿ ಸಂಸ್ಥೆಗಳು ಕಾನೂನು, ರಿಸರ್ವ್ ಬ್ಯಾಂಕ್, ನಬಾರ್ಡ್‌ಗಳ ಮಾರ್ಗಸೂಚಿ ಜೊತೆಗೆ ಸುತ್ತಮುತ್ತಲಿನ ಹಣಕಾಸು ಸಂಸ್ಥೆಗಳ ಪೈಪೋಟಿಯೊಂದಿಗೆ ಕೆಲಸ ಮಾಡಬೇಕಾಗಿದೆ. ಆದುದರಿಂದ ಪ್ರತಿ ಯೊಬ್ಬರು ತಿಳುವಳಿಕೆ ಪಡೆದುಕೊಳ್ಳಬೇಕಾಗಿರುವುದು ಅತೀ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಸಿ.ಲೋಕಪ್ಪ ಗೌಡ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರು/ಸಿಇಓಗಳಿಗೆ ಉಡುಪಿಯಲ್ಲಿ ಹಮ್ಮಿಕೊಳ್ಳಲಾದ ಆಡಳಿತ ನಿರ್ವಹಣೆ, ಆರ್ಥಿಕ ವ್ಯವಹಾರದ ಕಾರ್ಯದಕ್ಷತೆ ಹಾಗೂ ಆದಾಯ ತೆರಿಗೆ ಕುರಿತು ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮೈಕ್ರೋ ಫೈನಾನ್ಸ್, ಅರ್ಬನ್ ಬ್ಯಾಂಕ್, ವಾಣಿಜ್ಯ ಬ್ಯಾಂಕ್‌ಗಳು, ಚಿನ್ನದ ವ್ಯವಹಾರ ಮಾಡುವವರ ಪೈಪೋಟಿಗಳನ್ನು ಎದುರಿಸಿ ಸಹಕಾರಿ ಸಂಘಗಳನ್ನು ನಡೆಸಬೇಕಾಗಿದೆ. ಇಂದು ಸ್ವಸಹಾಯ, ಸ್ತ್ರೀಶಕ್ತಿ, ಗ್ರಾಮೀಣಾಭಿವೃದ್ಧಿ ಸಂಘ ಗಳೆಲ್ಲವೂ ಹಣಕಾಸಿನ ವ್ಯವಹಾರವನ್ನೇ ಮಾಡುತ್ತಿದೆ. ಇವರೆಲ್ಲ ಒಮ್ಮೆ ನಿಗದಿ ಪಡಿಸಿರುವ ಒಂದು ನಿಯಮ, ಪದ್ಧತಿಯಂತೆ ನಡೆದುಕೊಂಡು ಹೋಗುತ್ತಿದ್ದಾರೆ. ಆದರೆ ಸಹಕಾರಿ ಸಂಘಗಳು ಕಾಯಿದೆ, ಕಾನೂನು, ರಿಸರ್ವ್ ಬ್ಯಾಂಕ್, ನಬಾರ್ಡ್‌ಗಳ ಮಾರ್ಗಸೂಚಿಯಂತೆ ಕೆಲಸ ಮಾಡಿಕೊಂಡು ಹೋಗಬೇಕಾ ಗಿದೆ ಎಂದು ಅವರು ತಿಳಿಸಿದರು.
ಕಾನೂನಿನಲ್ಲಿನ ತಿದ್ದುಪಡಿ, ಸರಕಾರದ ಸುತ್ತೋಲೆ, ನಿರ್ದಶನ, ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳನ್ನು ಪಾಲಿಸದೆ ನಾವು ಆಡಳಿತ ನಡೆಸುವಂತಿಲ್ಲ. ಆ ದಿಸೆಯಿಂದ ಈ ಕುರಿತು ಹೆಚ್ಚಿನ ತರಬೇತಿ ಪಡೆದುಕೊಳ್ಳಬೇಕಾಗಿದೆ ಎಂದ ಅವರು, ಕ್ರೆಡಿಟ್ ಸೊಸೈಟಿಗಳಿಗೆ ಟಿಡಿಎಸ್ ಮತ್ತು ತೆರಿಗೆಯು ದೊಡ್ಡ ಹೊಡೆತ ವಾಗಿದೆ. ಆದಾಯ ತೆರಿಗೆ ವಿಧಿಸುವ ಕುರಿತು ನಮಗೆ ಯಾರಿಗೂ ಸ್ಪಷ್ಟತೆ ಇಲ್ಲ. ಈ ವಿಚಾರದಲ್ಲಿ ನಾವು ಗೊಂದಲದಲ್ಲಿ ಇದ್ದೇವೆ. ಇದನ್ನು ನಿವಾರಣೆ ಮಾಡ ಬೇಕಾದರೆ ಅರಿವು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಎಸ್. ಎನ್.ಅರುಣ್ ಕುಮಾರ್, ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಲಾವಣ್ಯ ಕೆ.ಆರ್. ಮಾತನಾಡಿದರು. ಸಹಕಾರ ಸಂಘಗಳ ಅಪರ ನಿಬಂಧಕ ಡಾ.ಕೆ.ಪಿ.ಗುರುಸ್ವಾಮಿ, ವಕೀಲ ಮುಹಮ್ಮದ್ ಸುಹಾನ್ ಉಪನ್ಯಾಸ ನೀಡಿದರು.
ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ನಿರ್ದೇಶಕರು ಗಳಾದ ಕಟಪಾಡಿ ಶಂಕರ್ ಪೂಜಾರಿ, ಯಶ್ಪಾಲ್ ಸುವರ್ಣ, ಹರೀಶ್ ಕಿಣಿ, ಸುರೇಶ್ ರಾವ್, ಕೊರಗ ಪೂಜಾರಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಪ್ರತಿನಿಧಿ ಅಶೋಕ್ ಕುಮಾರ್ ಶೆಟ್ಟಿ, ವೃತ್ತಿಪರ ನಿರ್ದೇಶಕ ಮನೋಜ್ ಕರ್ಕೇರ ಉಪಸ್ಥಿತರಿದ್ದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಇಓ ಹರೀಶ್ ಬಿ.ಬಿ. ವಂದಿಸಿ ದರು. ನಿರ್ದೇಶಕ ಶ್ರೀಧರ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.
ಸಹಕಾರಿ ಚುನಾವಣೆಯಲ್ಲೂ ಪಕ್ಷ, ಜಾತಿ ರಾಜಕೀಯ!
‘ಅಂದು ಸಹಕಾರಿಗಳೇ ಒಂದೆಡೆ ಸೇರಿ ಚುನಾವಣೆಯ ರೀತಿಯಲ್ಲಿ ನಾವು ನಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದೇವು. ಬರುಬರುತ್ತ ಚುನಾವಣೆಗಳು ನಡೆದವು. ಆರಂಭದಲ್ಲಿ ಒಂದು ವರ್ಷ ನಂತರ ಮೂರು ವರ್ಷಗಳಿಗೊಮ್ಮೆ ಚುನಾವಣೆ ನಡೆದವು. ಈಗ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ’
‘ಆದರೆ ಈಗ ರಾಜಕೀಯ ಪಕ್ಷ ಪ್ರೇರಿತ ಹಾಗೂ ಜಾತಿ ಆಧಾರದಲ್ಲಿ ಚುನಾವಣೆ ಗಳು ನಡೆಯುತ್ತಿವೆ. ಇದರ ಜೊತೆಗೆ ಸಹಕಾರಿಗಳಿಗೆ ಊಟ ಕೊಟ್ಟು ಓಟು ತೆಗೆದು ಕೊಳ್ಳುವ ಪರಿಸ್ಥಿತಿ ಈ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಆಡಳಿತ ಮಂಡಳಿಯಲ್ಲಿ ಅನುಭವ ಇದ್ದವರು ಮತ್ತು ನುರಿತರು ಹಾಗೂ ಉತ್ತಮ ಕೆಲಸ ಮಾಡಿದವರು ಬೋರ್ಡಿಗೆ ಬರುತ್ತಿದ್ದರೆ ಈ ಕ್ಷೇತ್ರದಲ್ಲಿ ಇಂದಿನ ಈ ಕಷ್ಟದ ಪರಿಸ್ಥಿತಿ ಇರುತ್ತಿರಲಿಲ್ಲ ಎಂದು ಬಿ.ಸಿ.ಲೋಕಪ್ಪ ಗೌಡ ತಿಳಿಸಿದರು.







